ಮುಂಗಾರು ಹಂಗಾಮಿಗೆ ಜಿಲ್ಲಾದ್ಯಂತ ಮಳೆಯ ಕೊರತೆ ಇದ್ದು, ಕೃಷಿ ಚಟುವಟಿಕೆಗಳು ವೇಗ ಪಡೆದಿಲ್ಲ. ಕೃಷಿಕರು ಭರವಸೆ ಕಳೆದುಕೊಂಡಿದ್ದು, ಎಲ್ಲೆಡೆ ಬರದ ಛಾಯೆ ದಟ್ಟವಾಗಿ ಆವರಿಸಿದೆ. ಬೆಳೆ ಸಾಲ ಮನ್ನಾ ಮಾಡಿ, ಜಿಲ್ಲೆಯನ್ನು ಬರ ಎಂದು ಘೋಷಿಸಿ ಪರಿಹಾರವನ್ನಾದರೂ ಕೊಡಿ ಎಂದು ರೈತರು ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 15ರವರೆಗೆ ಒಟ್ಟು ಶೇ.51ರಷ್ಟು ಮಳೆಯ ಕೊರತೆಯಿದೆ. ಮುಂಗಾರು ಬಿತ್ತನೆಗೆ ಹದಗೊಂಡಿದ್ದ ಶೇ 30ರಷ್ಟು ಪ್ರದೇಶ ಬೀಜ ಕಂಡಿಲ್ಲ. ಮಳೆಯಿಲ್ಲದೆ ಆಗಸದತ್ತ ಚಿತ್ತ ನೆಟ್ಟ ರೈತರು ಬುಟ್ಟಿ ಜಾತ್ರೆ, ಪಾದಯಾತ್ರೆ, ಖಾಂಡ ನಡೆಸಿ ದೇವರ ಮೊರೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಕಪ್ಪೆ, ಗೊಂಬೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸುವ ಕಾರ್ಯಗಳು ಗ್ರಾಮೀಣ ಭಾಗದಲ್ಲಿ ನಿತ್ಯ ನಡೆಯುತ್ತಿದೆ.
ರೈತರ ಜೀವನಾಡಿ ಕಾರಂಜಾ ಜಲಾಶಯ, ಮಾಂಜ್ರಾ ನದಿ ಸೇರಿದಂತೆ ಕೆರೆ-ಕಟ್ಟೆ, ಬಾವಿಗಳಲ್ಲಿ ನೀರಿನಮಟ್ಟ ಕುಸಿದಿದೆ. ವಾಡಿಕೆಯಂತೆ ಮಳೆ ಸುರಿದಿದ್ದರೆ ಇಷ್ಟೊತ್ತಿಗಾಗಲೇ ಕೃಷಿ ಚಟುವಟಿಕೆ ಬಿರುಸುಗೊಳ್ಳಬೇಕಿತ್ತು. ಉದ್ದು, ತೊಗರಿ, ಸೋಯಾಬಿನ್ ಸೇರಿ ಇತರೆ ಬೆಳೆಗಳ ಹೊಲ ಗದ್ದೆಗಳು ಹಸಿರಿನಿಂದ ನಳನಳಿಸ ಬೇಕಿತ್ತು. ಆದರೀಗ ಪರಿಸ್ಥಿತಿ ಪೂರ್ತಿ ಉಲ್ಟಾ ಆಗಿದೆ. ಬೇಸಿಗೆಯಂತೆ ಬಿಸಿಲಿನ ಪ್ರಖರತೆ ಮತ್ತೆ ಶುರುವಾಗಿದ್ದು, ಎಲ್ಲೆಡೆ ಬರದ ಕಾರ್ಮೋಡ ಕವಿದಿದೆ. ಜಿಲ್ಲೆಯ 4.21 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ 2.76 ಲಕ್ಷ ಹೆಕ್ಟೇರ್ ಕ್ಷೇತ್ರ ಬಿತ್ತನೆಯಾಗಿದೆ. ಈ ಪೈಕಿ 1.57 ಲಕ್ಷ ಹೆಕ್ಟೇರ್ ಪ್ರದೇಶ ಸೋಯಾಬಿನ್ ಬಿತ್ತನೆಯಾಗಿದ್ದು ಗಮನಾರ್ಹ ಸಂಗತಿ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಶೇ 67ರಷ್ಟು ಬಿತ್ತನೆಯಾಗಿದೆ. ಆದರೆ, ಬಸವಕಲ್ಯಾಣ, ಹುಲಸೂರ ತಾಲೂಕಿನಲ್ಲಿ ಶೇ 41ರಷ್ಟು ಕ್ಷೇತ್ರ ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದರೂ ತೇವಾಂಶದ ಕೊರತೆಯಿಂದ ಬೀಜ ಮೊಳಕೆ ಒಡೆದಿಲ್ಲ. ಕೆಲವೆಡೆ ಗೇಣುದ್ದ ಬೆಳೆದಿದ್ದ ಸಸಿಗಳು ಬಿಸಿಲಿಗೆ ಬಾಡುತ್ತಿವೆ. ಇನ್ನೂ ಒಂದು ವಾರ ಮಳೆ ಆಗದಿದ್ದರೆ ಬೆಳೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ರೈತರ ಅಳಲು. ಸಾಲ-ಸೂಲ ಮಾಡಿ ಬೀಜ, ಗೊಬ್ಬರ ಖರೀದಿಸಿದ್ದ ರೈತರೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೆಡೆ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ತೊಂದರೆ ಎದುರಾಗುತ್ತಿದೆ.
ಮಳೆಯ ದರ್ಶನವಾಗದ ಕಾರಣ ಬೆಳೆಗಳ ರಕ್ಷಿಸಲು ರೈತರು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಜುಲೈ ಮೊದಲ ವಾರದಲ್ಲಿ ಅಲ್ಪ ಪ್ರಮಾಣದ ಮಳೆ ಬಂದಾಗ ಭೂಮಿಗೆ ಬೀಜ ಹಾಕಿ ಸಂತಸಗೊಂಡ ರೈತಾಪಿ ವರ್ಗ ಮಳೆ ಸುರಿಯುವ ನಿರೀಕ್ಷೆಯಲ್ಲಿ ಸೋಯಾಬಿನ್, ತೊಗರಿ, ಹೆಸರು, ಉದ್ದು ಬೀಜಗಳ ಬಿತ್ತನೆ ಮಾಡಿದ್ದರು. ಆದರೀಗ, ಮಳೆ ಕೊರತೆಯಿಂದ ಬೆಳೆ ಒಣಗುತ್ತಿರುವುದರಿಂದ ಕಂಗಾಲಾದ ರೈತರು ತುಂತುರು (ಸ್ಟ್ರಿಂಕ್ಲರ್) ನೀರಾವರಿ ಮೂಲಕ ಬೆಳೆಗಳಿಗೆ ನೀರು ಹಾಯಿಸುವ ಹರಸಾಹಸಕ್ಕಿಳಿದಿದ್ದಾರೆ. ಇನ್ನೊಂದಿಷ್ಟು ರೈತರು ಕೊಳವೆ ಬಾವಿ, ತೆರೆದ ಬಾವಿ ಇರುವ ರೈತರಿಂದ ನೀರು ಖರೀದಿಸಿ ಬೆಳೆಗಳಿಗೆ ಹಾಯಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಸೂಪರ್ ʼಎಲ್ ನಿನೋʼ ಪರಿಣಾಮದಿಂದ ಬರ, ಅಕಾಲಿಕ ಮಳೆ, ಭೂಕುಸಿತದಂತಹ ಸಮಸ್ಯೆಗಳು ಉಂಟಾಗಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿಯ ವಾತಾವರಣ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಮುಂದಿನ ದಿನಗಳಲ್ಲಿಯೂ ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಬಹುದು ಎಂದು ವರದಿಗಳು ಹೇಳುತ್ತಿವೆ.
ಆಗ ನೆರೆ-ಈಗ ಬರ :
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆ ಮಾಯವಾಗಿ, ಬಿಸಿಲಿನ ವಾತಾವರಣದಿಂದಾಗಿ ಬೇಸಿಗೆಯ ಅನುಭವ ಆಗುತ್ತಿದೆ. ಜೂ.1ರಿಂದ ಜು.15ವರೆಗೆ ವಾಡಿಕೆಯ 195 ಮಿ.ಮೀ. ಮಳೆಯ ಬದಲು 95.4 ಮಳೆ ಸುರಿದಿದೆ. ಅಂದ್ರೆ ಜಿಲ್ಲಾದ್ಯಂತ ಶೇ.51ರಷ್ಟು ಕೊರತೆ ಎದುರಾಗಿದೆ. ಮಳೆಯಿಲ್ಲದ ಕಾರಣ ರೈತ ಸಮೂಹ ಆತಂಕದಲ್ಲಿದ್ದು, ಬರದ ಮುನ್ಸೂಚನೆ ಕಾಡುತ್ತಿದೆ, ಕೃಷಿ ಕಾರ್ಮಿಕರು ಹಾಗೂ ಇತರ ಶ್ರಮಿಕರು ಕೆಲಸಕ್ಕಾಗಿ ನಗರಗಳಿಗೆ ಗುಳಿ ಹೋಗುವ ಅನಿವಾರ್ಯತೆ ಎದುರಾಗಿದೆ.
ಕಳೆದ ಬಾರಿ ನೆರೆಯಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಕಳೆದಕೊಂಡ ಅನ್ನದಾತ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಇದೀಗ ಮಳೆಯ ಕೊರತೆ ತೀವ್ರವಾಗಿದ್ದು, ಬರಗಾಲದ ಛಾಯೆ ಆವರಿಸಿದೆ. ಒಣ ಬೇಸಾಯವನ್ನೆ ನೆಚ್ಚಿಕೊಂಡಿರುವ ಬಹುತೇಕ ರೈತರು, ಇತರೆ ಕೃಷಿ ಕಾರ್ಮಿಕರು ಸಾಲದ ಸುಳಿಗೆ ಸಿಲುಕಿದ್ದಾರೆ. ಈ ಭಾಗದಲ್ಲಿ ಕೃಷಿ ಹೊರತುಪಡಿಸಿ ಪರ್ಯಾಯ ಉದ್ಯೋಗ ಸೃಷ್ಟಿಸುವ ಅಧಿಕ ಸಂಖ್ಯೆಯಲ್ಲಿ ಕೈಗಾರಿಕೆ, ಕಂಪನಿಗಳು ಇಲ್ಲದಿರುವುದಕ್ಕೆ ಸಾಲ ತೀರಿಸಲು ಅನಿವಾರ್ಯವಾಗಿ ಹೈದರಾಬಾದ್, ಪುಣೆ, ಮುಂಬೈ ಹಾಗೂ ಬೆಂಗಳೂರುನಂತಹ ನಗರಗಳಿಗೆ ವಲಸೆ ತೆರಳಿ ಕಡಿಮೆ ಕೂಲಿಗೆ ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುವಂತ ದಯನೀಯ ಸ್ಥಿತಿ ಸಾಮಾನ್ಯ ಎಂಬಂತಾಗಿದೆ.

ಜಿಲ್ಲೆಯಲ್ಲಿ ಕೇವಲ ಶೇ 10-12ರಷ್ಟು ಮಾತ್ರ ನೀರಾವರಿ ಪ್ರದೇಶ ಇರುವುದಾಗಿ ಜನಪ್ರತಿನಿಧಿಗಳೇ ಹಲವು ಬಾರಿ ಹೇಳುತ್ತಿದ್ದಾರೆ. ಆದರೆ, ಜಿಲ್ಲೆಯ ನೀರಾವರಿ ಪ್ರದೇಶ ಹೆಚ್ಚಳಕ್ಕೆ ವಿವಿಧ ನೀರಾವರಿ ಯೋಜನೆಗಳು ಜಾರಿಗೊಳಿಸುವ ಬಗ್ಗೆ ಚುನಾಯಿತ ಪ್ರನಿಧಿಗಳು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂಬುದು ಜನಜನಿತ. ಕೇವಲ ಮಳೆಯನ್ನೇ ನಂಬಿರುವ ಕೃಷಿಕರಿಗೆ ಪದೇ ಪದೇ ಬರ-ನರೆ ಬಾಧಿಸುತ್ತಿದೆ. ಬೇಸಾಯದಿಂದ ಆರ್ಥಿಕ ನಷ್ಟವೇ ಇಲ್ಲಿನ ಅನ್ನದಾತರಿಗೆ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
ಇನ್ನು ಗ್ರಾಮೀಣ ಭಾಗದಲ್ಲಿ ಕಾರ್ಮಿಕರಿಗೆ, ಕೂಲಿಕಾರರಿಗೆ, ನಿರುದ್ಯೋಗಿ ಯುವಕರ ಆರ್ಥಿಕ ಭದ್ರತೆಗೆ ಸ್ಥಳೀಯವಾಗಿಯೇ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ಮತ್ತು ರಿಯಾಯಿತಿ ದರದಲ್ಲಿ ಸಾಲ ನೀಡುವುದು. ಉದ್ಯೋಗ ಸೃಷ್ಟಿಗೆ ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆರ್ಥಿಕತೆ ವೈಫಲ್ಯದಿಂದಾಗಿಯೇ ಕೃಷಿಕರು, ಕೂಲಿ ಕಾರ್ಮಿಕರು ತವರು ಕ್ಷೇತ್ರ ತೊರೆಯುವ ಅನಿವಾರ್ಯತೆ ಎದುರಾಗುವುದು ಸಹಜ. ಆದರೆ, ಬರ-ನೆರೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಸರ್ಕಾರಗಳು ತಾತ್ಕಾಲಿಕ ಪರಿಹಾರಕ್ಕಾಗಿ ಹರಸಾಹಸ ಪಡದೆ ದೀರ್ಘಾವಧಿ ಯೋಜನೆ ರೂಪಿಸಲು ಯೋಚಿಸುವುದು ಒಳಿತು.
ʼಬರʼ ಘೋಷಣೆಯ ಕೂಗು
“ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಈ ಬಾರಿ ಕೇವಲ ಶೇ12ರಷ್ಟು ಮಳೆಯಾಗಿದ್ದು, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಬಾರಿ 30 ಲಕ್ಷ ಹೆಕ್ಟೇರ್ಗೂ ಅಧಿಕ ಭೂಮಿ ಬಿತ್ತನೆಯಾಗದೆ ಖಾಲಿ ಉಳಿದಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಅನ್ನದಾತನ ಸಮಸ್ಯೆಗೆ ಸ್ಪಂದಿಸಿ ಪ್ರತಿ ಎಕರೆಗೆ ತಕ್ಷಣವೇ ₹50 ಸಾವಿರ ಪರಿಹಾರ ಬಿಡುಗಡೆ ಮಾಡಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
“ಬೀದರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಭಾವದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ತಕ್ಷಣವೇ ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಈಚೆಗೆ ಜಿಲ್ಲೆಗೆ ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ತಮ್ಮ ಭಾಷಣದಲ್ಲಿ ಮಾತನಾಡಿ ಮನವಿ ಮಾಡಿದರು.

ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬೀದರ್ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಿಸಬೇಕು ಎಂದು ಬೀದರ್ ಗಾಂಧಿ ಗಂಜ್ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಒಣ ಬೇಸಾಯವನ್ನೇ ಅವಲಂಬಿಸಿದ ರೈತರಿಗೆ ಮುಂಗಾರು ಬೆಳೆಗಳಾದ ಉದ್ದು, ಹೆಸರು, ಸೋಯಾಬೀನ್ ಮೊದಲಾದವು ಆಸರೆ ಆಗುತ್ತಿದ್ದವು. ಆದರೆ, ಬರಗಾಲದಿಂದ ಮುಂಗಾರಿನಲ್ಲಿ ಉತ್ತಮ ಬೆಳೆ ಪಡೆಯುವ ರೈತರ ನಿರೀಕ್ಷೆಗಳು ನುಚ್ಚು ನೂರಾಗಿವೆ. ಮಳೆ ಕೊರತೆಯಿಂದ ಶೇ 90ರಷ್ಟು ಬೆಳೆಗಳು ಹಾಳಾಗಿವೆ. ರೈತರ ಸಂಕಟದ ಸಮಯದಲ್ಲಿ ರಾಜ್ಯ ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು. ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಿ ರೈತರಿಗೆ ಯೋಗ್ಯ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಬರ ಮತ್ತು ನೆರೆ ಪ್ರಕೃತಿಯ ವಿಪತ್ತುಗಳಾಗಿರಬಹುದು. ಕಳೆದ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿತು. ಆದರೆ, ಅದು ಭೀಕರ ಎನಿಸಿರಲಿಲ್ಲ. ಬೆಳೆ ಕಳೆದುಕೊಂಡಿದ್ದರೂ ಕುಡಿಯೋಕೆ ನೀರಾದರೂ ಸಿಕ್ಕಿತು. ಇದೀಗ ಸೃಷ್ಟಿಯಾದ ಬರದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತದೆ. ನೆರೆಯಿಂದ ಪ್ರಕೃತಿ ಹಸಿರುಮಯವಾಗಿ ಜಾನುವಾರುಗಳಿಗೆ ನೀರು, ಮೇವಿನ ಕೊರತೆಯಾಗುವುದಿಲ್ಲ. ನೆರೆಗಿಂತ ಬರ ಅತ್ಯಂತ ಭೀಕರವಾಗಿರುತ್ತದೆ. ಬರ-ನೆರೆಗಳಿಗೆ ಎದೆಯೊಡ್ಡಿ ನಿಲ್ಲುವ ಅನ್ನದಾತನ ಆರ್ಥಿಕ ಸದೃಢತೆಗೆ ಬೆಳೆ ವಿಮೆ, ಪರಿಹಾರ ಅಷ್ಟೇ ಸಾಕಾಗುವುದಿಲ್ಲ. ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಸೇರಿದಂತೆ ಕೃಷಿ ವಲಯಕ್ಕೆ ಹೊಸ ಯೋಜನೆಗಳ ಅಗತ್ಯವಿದೆ ಎಂಬುದು ರೈತ ಸದಾನಂದ ಪಾಟೀಲ್ ಅವರ ಸದಾಶಯ.
ಇದನ್ನೂ ಓದಿ : ಬೀದರ್ | ಉತ್ತಮ ಸಮಾಜ ಕಟ್ಟಲು ಪುಸ್ತಕ ಓದು ಅಗತ್ಯ : ಸಿದ್ರಾಮಪ್ಪಾ ಮಾಸಿಮಾಡೆ
ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಆರ್ಥಿಕ ಸಂಕಟಕ್ಕೆ ಸಿಲುಕಿದ ರೈತರು ಈ ಬಾರಿ ಮತ್ತೆ ಅನಾವೃಷ್ಟಿಯಿಂದಾಗಿ ಬಿತ್ತನೆ ಸಂಪೂರ್ಣ ಕುಂಠಿತಗೊಂಡಿದೆ. ಸಾಲ-ಸೂಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ರೈತರು ಮಳೆಯಿಲ್ಲದೆ ಚಿಂತೆಗೀಡಾಗಿದ್ದಾರೆ. ಕೂಡಲೇ ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕೆಂದು ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸುತ್ತಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



