ಅಲೆಮಾರಿ ಜನಾಂಗದವರಿಗೆ ನಿಗದಿಪಡಿಸಿದ ಯೋಜನೆಗಳು ಸರಿಯಾದ ಸಮಯಕ್ಕೆ ಹಾಗೂ ಕಾಲಮಿತಿಯೊಳಗಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವರದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಮತ್ತು ಸಮಾಲೋಚನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ʼಈಗಾಗಲೇ ಸ್ಥಗಿತಗೊಂಡ ಅಲೆಮಾರಿ ಸಮುದಾಯ ಭವನಗಳು ನಿಗಮದಿಂದ ಅನುದಾನ ನೀಡಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಕಳೆದ ವರ್ಷ ಕೂಡ ಏ.18ರಂದು ನಾನು ಬೀದರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದೆ. ಆ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರವಾಸ ಕೈಗೊಂಡು ಅಲೆಮಾರಿ ಸಮುದಾಯದವರ ವಾಸಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅವರ ಸಮಸ್ಯೆಗಳನ್ನು ತಿಳಿದುಕೊಂಡಿದ್ದೆ. ಇವಾಗ ಕೂಡ ಅಧಿಕಾರಗಳ ಜೊತೆಗೆ ಹೋಗಿ ಪರಿಶೀಲನೆ ಮಾಡಿದ್ದೇನೆʼ ಎಂದರು.
ʼಅಲೆಮಾರಿ ಸಮುದಾಯದವರಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳಲು ಈಗಾಗಲೇ ನಾನು ನಮ್ಮ ಸಮಾಜ ಕಲ್ಯಾಣ ಇಲಾಖೆ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿ, ಕಾಲಮಿತಿಯೋಳಗಾಗಿ ಆ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದೇನೆʼ ಎಂದು ಹೇಳಿದರು.
ʼನಾವು ಭೇಟಿ ನೀಡಿದ ಸ್ಥಳಗಳಲ್ಲಿ ಕೈಗೊಂಡಿರುವ ಕಾರ್ಯಕ್ರಮ, ಯಾವ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಿದ್ದೇನೆ. ಚೌಳಿ ಕಮಾನ್ ಹತ್ತಿರದಲ್ಲಿರುವ ಸಿಂಧೋಳಿ ಮತ್ತು ಮಾಂಗರವಾಡಿ ಸೇರಿದಂತೆ ವಿವಿಧ 84 ಕುಟುಂಬಗಳಿಗೆ ಅಲಿಯಂಬರ್ ಗ್ರಾಮದಲ್ಲಿ ಎರಡು ಎಕರೆ ಭೂಮಿಯನ್ನು ನಿಗದಿಪಡಿಸಿ ಲೇಔಟ್, ಪ್ಲಾನಿಂಗ್ ಮಾಡಿ ಪ್ರಸ್ತಾವನೆಯನ್ನು ನಿಗಮಕ್ಕೆ ಕಳಿಸಬೇಕುʼ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ʼಈಗಾಗಲೇ ಎರಡು ಎಕರೆ ಭೂಮಿಯನ್ನು ನಿಗದಿ ಮಾಡಿದ್ದಾರೆ. ಆದರೆ ಲೇಔಟ್, ಪ್ಲಾನಿಂಗ್ ಮಾಡಿ ಪ್ರಸ್ತಾವನೆ ನಿಗಮಕ್ಕೆ ಕಳಿಸಿರುವುದಿಲ್ಲ. ಇದರ ಬಗ್ಗೆ ಚರ್ಚಿಸಿ ಲೇಔಟ್ ಪ್ಲಾನಿಂಗ್ ಮಾಡಿ ಅದಕ್ಕೆ ಎಷ್ಟು ಅನುದಾನ ಬೇಕು ಅಷ್ಟು ನಮ್ಮ ನಿಗಮದಿಂದ ನೀಡಲಾಗುವುದು. ಈಗಾಗಲೇ ಚೌಳಿ ಕಮಾನ್ ಸಮೀಪದಲ್ಲಿರುವ 84 ಕುಟುಂಬಗಳಿಗೆ ಶೌಚಾಲಯಕ್ಕೆ ಸಮಸ್ಯೆ ಆಗುತ್ತಿರುವುದರಿಂದ ಬೀದರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಕರೆ ಮಾಡಿ ಮೊಬೈಲ್ ಶೌಚಾಲಯ ಒದಗಿಸಲು ಸೂಚಿಸಿದ್ದೇನೆʼ ಎಂದರು.
ಇದನ್ನೂ ಓದಿ : ಬೀದರ್ | ಪ್ರತ್ಯೇಕ ಮಹಿಳಾ ಮೀಸಲಾತಿ ಮಸೂದೆ ತನ್ನಿ : ಸಂಸದ ಸಾಗರ ಖಂಡ್ರೆ
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ಆನಂದಕುಮಾರ ಏಕಲವ್ಯ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ ಸೇರಿದಂತೆ ಎಲ್ಲ ತಾಲ್ಲೂಕಿನ ತಹಸೀಲ್ದಾರರು, ಅಲೆಮಾರಿ ಸಮುದಾಯದ ಅನುಷ್ಠಾನ ಸಮಿತಿ ಸದಸ್ಯರಾದ ಪಿ.ಟಿ.ಶ್ಯಾಮ, ರೇಖಾ ರಾಕೇಶ, ಮಹೇಶ, ತಿಪ್ಪಣ್ಣ, ಆಕಾಶ ಸೇರಿದಂತೆ ಅಲೆಮಾರಿ ಸಮಾಜದ ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ತಿತರಿದ್ದರು.





