ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯ ಮಧ್ಯೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಬಸವಕಲ್ಯಾಣದ ಜವಾಹರಲಾಲ್ ನೆಹರು ವಿದ್ಯಾಲಯದ ಶಿಕ್ಷಕ ಧರ್ಮಣ್ಣಾ ಚಿಟ್ಟಾ ಹೇಳಿದರು.
ಔರಾದ್ ಪಟ್ಟಣದ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ವಚನ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಜಾಗೃತ ಸಮಿತಿಯಿಂದ ಗುರುವಾರ ಸಂಜೆ ಆಯೋಜಿಸಿದ ಮನೆಗೊಂದು ಗೃಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼಸಮಾಜದಲ್ಲಿನ ಅನೇಕ ಸತ್ಯ ಸಂಗತಿಗಳನ್ನು ಅರಿತುಕೊಳ್ಳಲು ಪುಸ್ತಕ ಜ್ಞಾನ ಅಮೂಲ್ಯವಾಗಿದೆ. ಪುಸ್ತಕಗಳು ಜ್ಞಾನ, ಅನುಭವ ಹಾಗೂ ಜೀವನದ ಮಾರ್ಗದರ್ಶಕಗಳಾಗಿವೆ. ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರಲ್ಲೂ ಪುಸ್ತಕ ಓದುವ ಅಭಿರುಚಿ ಹೆಚ್ಚಾಗಬೇಕಿದೆ. ಒಂದು ಪುಸ್ತಕ ನೆಮ್ಮದಿಯ ಬದುಕಿಗೆ ಬೆಳಕಾಗುತ್ತದೆʼ ಎಂದು ಅಭಿಪ್ರಾಯಪಟ್ಟರು.
ವಚನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ.ಡಿ.ಬೋಳಿಗಾವೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ʼಜನಸಾಮನ್ಯರಲ್ಲಿ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಿಸುವ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಪ್ರೇರಣಾದಾಯಕವಾಗಿದೆ. ಮಕ್ಕಳು ಪಠ್ಯದೊಂದಿಗೆ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಂಪರೆ ಉಳಿಸಿ ಬೆಳೆಸುವ ಜೊತೆಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕುʼ ಎಂದರು.

ದೀಪಾಲಯ ಶಾಲೆಯ ಮುಖ್ಯಶಿಕ್ಷಕಿ ದೀಪಾ ಫರ್ನಾಂಡಿಸ್ ಮಾತನಾಡಿ, ʼಪುಸ್ತಕಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಓದುವ ಹವ್ಯಾಸ ನಮ್ಮೊಳಗೆ ವಿಶಿಷ್ಟ ಕೌಶಲ್ಯಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ರಾಜ್ಯ, ದೇಶ-ವಿದೇಶ ಹೆಸರಾಂತ ಲೇಖಕರ ಎಲ್ಲ ಪ್ರಕಾರಗಳ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು’ ಎಂದು ನುಡಿದರು.
ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ ಅವರು ಪ್ರಾಸ್ತಾವಿಕ ಮಾತನಾಡಿ, ʼಪುಸ್ತಕ ಸಂಸ್ಕೃತಿ ಉಳಿಸಿ ಬೆಳೆಸುವ ಜೊತೆಗೆ ಮನೆ-ಮನಗಳಲ್ಲಿ ಓದುವ ಹವ್ಯಾಸ ಉತ್ತೇಜಿಸುವ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಮಹತ್ವಕಾಂಕ್ಷಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪುಸ್ತಕಗಳ ನಮ್ಮ ಜೀವನದ ಸಂಗಾತಿಗಳು, ಹೆಚ್ಚಿನ ಜ್ಞಾನಾರ್ಜನೆಗೆ ದಾರಿ ಮಾಡಿಕೊಡುತ್ತವೆ. ಪ್ರತಿಯೊಬ್ಬರ ಮನೆಯಲ್ಲಿಯೂ ಗ್ರಂಥಾಲಯಕ್ಕೆ ಜಾಗ ಮೀಸಲಿಟ್ಟು ಪುಸ್ತಕ ಸಂಗ್ರಹ ಹವ್ಯಾಸ ಬೆಳೆಸಿಕೊಳ್ಳಬೇಕುʼ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಚಂದ್ರಕಾಂತ ನಿರ್ಮಳೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಮತ್ತಿತರರು ಮಾತನಾಡಿದರು.
ವಿದ್ಯಾರ್ಥಿಗಳಾದ ವಚನಶ್ರೀ ಟಂಕಸಾಲೆ, ಆಯುಷ ಟಂಕಸಾಲೆ ಅವರು ಓದುವ ಹವ್ಯಾಸ ಹಾಗೂ ನೆಚ್ಚಿನ ಪುಸ್ತಕ ಓದಿನ ಅನುಭವ ಹಂಚಿಕೊಂಡರು. ವಿದ್ಯಾರ್ಥಿ ಸನ್ಯ್ರಾಯ್ ಶಿವಾನಂದ ಮೋಕ್ತೆದಾರ್ ವಚನ ಪಠಣ ನಡೆಸಿಕೊಟ್ಟರು. ವಿದ್ಯಾರ್ಥಿನಿ ಪೂನಂ ಭೂತಾಳೆ ಸಂವಿಧಾನ ಪ್ರಸ್ತಾವನೆ ಬೋಧಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಘಟಕದ ಸಂಚಾಲಕರಾಗಿ ಆಯ್ಕೆಯಾದ ಮಹೇಶ ಗೋರನಾಳಕರ್ ಹಾಗೂ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | ಡಾ.ರಾಜಕುಮಾರ್ ಬಹುಮುಖ ಪ್ರತಿಭೆಯ ನಟ
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ವೈಜಿನಾಥ ಬುಟ್ಟೆ, ಜಗನಾಥ ಮೂಲಗೆ, ಧನರಾಜ ನಿಟ್ಟೂರೆ, ಗಜಾನನ ಮಳ್ಳಾ, ಜಗದೀಶ್ವರ ಬಿರಾದರ, ಸುಜಾತಾ ಟಂಕಸಾಲೆ, ಉಮಾಕಾಂತ ವಿಳಾಸಪುರೆ, ಧನರಾಜ ಪಿಟ್ರೆ, ಶಿವಕಾಂತ ಮಜಗೆ, ರಮೇಶ ಪಾಂಚಾಳ, ಶಾಲಿವಾನ ದಾಮಾ, ಬಸವೇಶ ಭಾಲ್ಕೆ ಸೇರಿದಂತೆ ಅನೇಕರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರು. ಪಿಡಿಒ ಶರಣಪ್ಪಾ ನಾಗಲಗಿದ್ದೆ ವಂದಿಸಿದರು.





