ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಆರು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
625 ಅಂಕಗಳ ಪೈಕಿ 623 ಅಂಕಗಳನ್ನು ಪಡೆದು ಶೇ. 99.68 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯ ಪ್ರಥಮ ಸ್ಥಾನ ಪಡೆದ ಕಲಬುರಗಿ ದಕ್ಷಿಣ ವಲಯದ ಸಾವಳಗಿಯ ಅಜೀಮ್ ಪ್ರೇಮ್‌ಜಿ ಶಾಲೆಯ ವಿದ್ಯಾರ್ಥಿ ಗಣೇಶ್ ಅವರಿಗೆ ಜಿಲ್ಲಾಧಿಕಾರಿಗಳು ವಿಶೇಷ ಅಭಿನಂದನೆ ಸಲ್ಲಿಸಿದರು.
ಇದಲ್ಲದೆ, ತಲಾ 622 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಂಚಿಕೊಂಡ ಕಲಬುರಗಿಯ ಶರಣಬಸವೇಶ್ವರ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಮಾಧವಿ ಮತ್ತು ಮೇಘನಾ ಅವರನ್ನೂ ಸನ್ಮಾನಿಸಲಾಯಿತು. ಹಾಗೆಯೇ, 620 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದ ಕಲಬುರಗಿಯ ಜಗತ್ ಪ್ರದೇಶದ ಎಸ್‌ಸಿ, ಎಸ್‌ಟಿ ಪ್ರತಿಭಾನ್ವಿತ ಶಾಲೆಯ ಭಾಗ್ಯಶ್ರೀ, ಎಸ್‌ಆರ್‌ಎನ್ ಮೆಹತಾ ಶಾಲೆಯ ಓಂಕಾರ ಹಸು ಹಾಗೂ ಜೇವರ್ಗಿ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ನಿಸರ್ಗಾ ಅವರ ಸಾಧನೆಯನ್ನು ಜಿಲ್ಲಾಧಿಕಾರಿಗಳು ಪ್ರಶಂಸಿಸಿದರು.
ಇದೆ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ಹೊಂದಿ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಬುದ್ಧ ಪೂರ್ಣಿಮೆ ಅಂಗವಾಗಿ ಮೈತ್ರಿ, ಧಮ್ಮ ಪ್ರವಚನ ಕಾರ್ಯಕ್ರಮ
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿ.ಡಿ.ಪಿ.ಐ) ಶಂಕ್ರಮ ಢವಳಗಿ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.





