ದಶಕಗಳಿಂದ ಬಗೆಹರಿಯದೆ ಉಳಿದಿರುವ ಕಾರಂಜಾ ಜಲಾಶಯದ ರೈತ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನಿಯೋಗವು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಅವರನ್ನು ಭೇಟಿ ಮಾಡಿ ವಿಸ್ತೃತ ಚರ್ಚೆ ನಡೆಸಿತು.
ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಭೂಮಿ, ಮನೆ ಹಾಗೂ ಜೀವನಾಧಾರ ಕಳೆದುಕೊಂಡು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತ ಸಂತ್ರಸ್ತರ ಸಮಸ್ಯೆ, ಸರ್ಕಾರ ಈ ಹಿಂದೆ ನೀಡಿರುವ ಭರವಸೆಗಳು ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹೋರಾಟ ಸಮಿತಿಯ ಪ್ರಮುಖರು ಸಚಿವರ ಗಮನಕ್ಕೆ ತಂದರು.
ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವ ಕುರಿತು ಸರ್ಕಾರ ನೀಡಿರುವ ಭರವಸೆಯನ್ನು ಯಾವುದೇ ಕಾರಣಕ್ಕೂ ವಿಳಂಬಗೊಳಿಸದೆ, ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ನಿಯೋಗ ಒತ್ತಾಯಿಸಿತು. ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಂಡ ಬಳಿಕವೂ ಅದನ್ನು ಅನಗತ್ಯವಾಗಿ ವಿಳಂಬಗೊಳಿಸಿದರೆ, ಸಂತ್ರಸ್ತ ರೈತರ ಪರವಾಗಿ ಮತ್ತೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕಾರಂಜಾ ಸಂತ್ರಸ್ತರ ಪ್ರಕರಣವನ್ನು ಸಾಮಾನ್ಯ ಪರಿಹಾರ ಪ್ರಕರಣವಾಗಿ ಪರಿಗಣಿಸದೆ, ಮಾನವೀಯ ದೃಷ್ಟಿಕೋನದಿಂದ ವಿಶೇಷ ಪ್ರಕರಣವಾಗಿ ಪರಿಗಣಿಸಲಾಗುತ್ತಿದೆ. ದಶಕಗಳಿಂದ ಪರಿಹಾರಕ್ಕಾಗಿ ಕಾಯುತ್ತಿರುವ ಸಂತ್ರಸ್ತರ ನೋವು ಮತ್ತು ಸಮಸ್ಯೆಯ ಗಂಭೀರತೆಯನ್ನು ಸರ್ಕಾರ ಅರ್ಥಮಾಡಿಕೊಂಡಿದ್ದು, ಸಮರ್ಪಕ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಮುತುವರ್ಜಿ ವಹಿಸುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ಬೀದರ ಜಿಲ್ಲೆಯ ಇತರ ಜ್ವಲಂತ ಸಮಸ್ಯೆಗಳು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆಯೂ ಚರ್ಚೆ ನಡೆಯಿತು. ವಿಶೇಷವಾಗಿ ರೈತರಿಗಾಗಿ ಸ್ಥಾಪನೆಯಾಗಿರುವ ಡಿಸಿಸಿ ಬ್ಯಾಂಕ್ ಬಲವರ್ಧನೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ, ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ರೈತ ಸಮುದಾಯ ಎದುರಿಸುತ್ತಿರುವ ವಿವಿಧ ಸಂಕಷ್ಟಗಳ ಕುರಿತು ವಿಚಾರ ವಿನಿಮಯ ನಡೆಯಿತು.
ಬೀದರ ಜಿಲ್ಲೆಯ ಅಭಿವೃದ್ಧಿ ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ರಾಜಕೀಯ ಇಚ್ಛಾಶಕ್ತಿ, ಆಡಳಿತಾತ್ಮಕ ಬದ್ಧತೆ ಹಾಗೂ ಜನಪ್ರತಿನಿಧಿಗಳು ಮತ್ತು ಹೋರಾಟಗಾರರ ಸಮನ್ವಯದ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಜಿಲ್ಲೆಯ ಒಟ್ಟಾರೆ ಅಭಿವೃದ್ಧಿ ಹಾಗೂ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಅಗತ್ಯವಿರುವ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರಂಜಾ ಸಂತ್ರಸ್ತರ ಸಮಸ್ಯೆ ಕೇವಲ ಪರಿಹಾರದ ಮೊತ್ತಕ್ಕೆ ಸೀಮಿತವಾಗಿಲ್ಲ. ಭೂಮಿ ಮತ್ತು ಬದುಕಿನ ಆಧಾರ ಕಳೆದುಕೊಂಡ ರೈತ ಕುಟುಂಬಗಳಿಗೆ ನ್ಯಾಯ ಮತ್ತು ಗೌರವವನ್ನು ಮರಳಿ ನೀಡುವ ಪ್ರಶ್ನೆಯಾಗಿದೆ. ಸರ್ಕಾರ ನೀಡಿರುವ ಭರವಸೆ ಕಾರ್ಯರೂಪಕ್ಕೆ ಬಂದು ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಭಾಲ್ಕಿ | ರೈತರ ಸತ್ಯಾಗ್ರಹಕ್ಕೆ ಬಸವಲಿಂಗ ಪಟ್ಟದ್ದೇವರು ಬೆಂಬಲ, ಬೇಡಿಕೆ ಈಡೇರಿಕೆಗೆ ಆಗ್ರಹ
ನಿಯೋಗದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬೀದರ ಸಂಯೋಜಕ ವಿನಯ ಕುಮಾರ ಮಾಳಗೆ, ರೊಹನ್ ಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.





