ಸಂವಿಧಾನದ ವಿಧಿ 25ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಂತಃಕರಣದ ಪ್ರಕಾರ ಯಾವುದೇ ಧರ್ಮವನ್ನು ನಂಬಲು, ಆಚರಿಸಲು ಹಾಗೂ ಪ್ರಚಾರ ಮಾಡಲು ಹಕ್ಕು ಇದೆ. ಈ ಮೂಲಭೂತ ಹಕ್ಕುಗಳನ್ನು ದಮನಿಸುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ನಿಕಟಪೂರ್ವ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. ಆದರೆ ಸಂಘ ಪರಿವಾರದ ಕೆಲವು ಸಂಘಟನೆಗಳು ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದ್ದಾರೆ.
“ಕ್ರೈಸ್ತರ ಮೇಲೆ ನಡೆಯುವ ದಾಳಿಗಳನ್ನು ಧರ್ಮ, ಜಾತಿ ಹಾಗೂ ಪಕ್ಷಭೇದ ಮರೆತು ಪ್ರತಿಯೊಬ್ಬ ದೇಶದ ನಾಗರಿಕರೂ ಖಂಡಿಸಬೇಕು. ಯಾವುದೇ ಧರ್ಮದ ಜನರ ಮೇಲಿನ ದಾಳಿ ಸಂವಿಧಾನಬದ್ಧ ಹಕ್ಕುಗಳ ಮೇಲಿನ ದಾಳಿಯಾಗಿದೆ” ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳು ನಡೆಯುತ್ತಿವೆ ಎಂಬ ವರದಿಗಳು ಆತಂಕ ಮೂಡಿಸಿವೆ. ಕ್ರೈಸ್ತರ ಮನೆಗಳಲ್ಲಿ ನಡೆಯುವ ಗುಂಪು ಪ್ರಾರ್ಥನೆಗಳಿಗೆ ನುಗ್ಗಿ ಹಲ್ಲೆ ನಡೆಸುವುದು, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಮಾತ್ರವಲ್ಲದೆ ಮೃತರ ಅಂತ್ಯಸಂಸ್ಕಾರಕ್ಕೂ ಅಡ್ಡಿಪಡಿಸಿರುವ ಘಟನೆಗಳು ಅತ್ಯಂತ ಅಮಾನವೀಯವಾಗಿವೆ ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 23ರಂದು ಹೌರಾ ಜಿಲ್ಲೆಯ ಉಲುಬೇರಿಯಾ ಪ್ರದೇಶದಲ್ಲಿ ಕ್ರೈಸ್ತ ಕುಟುಂಬವೊಂದರ ಮನೆಯಲ್ಲಿ ನಡೆಯುತ್ತಿದ್ದ ಶಾಂತಿಯುತ ಗುಂಪು ಪ್ರಾರ್ಥನಾ ಸಭೆಗೆ ದೊಡ್ಡ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಈ ಸಂದರ್ಭದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಹಲ್ಲೆಗೆ ಯತ್ನಿಸಿ ಭೀತಿ ಸೃಷ್ಟಿಸಲಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಧರ್ಮಪ್ರಚಾರಕ (ಪಾಸ್ಟರ್) ಮಿಥುನ್ ಹಜ್ರಾ ಸೇರಿದಂತೆ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಪೂರ್ವ ಬರ್ಧಮಾನ್ ಜಿಲ್ಲೆಯ ಸಹಾನಗರದ ಸೇಂಟ್ ಕ್ಲಾರೆಟ್ ಚರ್ಚ್ ಸ್ಮಶಾನದಲ್ಲಿ ನಡೆಯುತ್ತಿದ್ದ ಕ್ರೈಸ್ತರ ಅಂತ್ಯಸಂಸ್ಕಾರಕ್ಕೂ ದುಷ್ಕರ್ಮಿಗಳ ಗುಂಪು ಅಡ್ಡಿಪಡಿಸಿರುವ ಆರೋಪ ಕೇಳಿಬಂದಿದೆ. ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುವುದರ ಜೊತೆಗೆ ಸಮಾಧಿ ಮಾಡಲಾಗಿದ್ದ ಶವವನ್ನು ಹೊರತೆಗೆದಿರುವ ಬಗ್ಗೆ ಸ್ಥಳೀಯ ಧರ್ಮಗುರುಗಳು ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ಚಾರ್ಲ್ಸ್ ಅಂಬ್ಲರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಜುಲೈ 5ರಂದು ದಕ್ಷಿಣ 24 ಪರಗಣ ಜಿಲ್ಲೆಯ ಸುಭಾಷ್‌ಗ್ರಾಮ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್ ಮೇಲೆ ದಾಳಿ ನಡೆಸಿ, ಆವರಣದಲ್ಲಿದ್ದ ಪವಿತ್ರ ಶಿಲುಬೆಗಳನ್ನು ಧ್ವಂಸಗೊಳಿಸಿರುವ ಘಟನೆ ವರದಿಯಾಗಿತ್ತು. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಲವಂತದ ಮತಾಂತರದ ಆರೋಪಗಳನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಮೇಲೆ ನಿರಂತರವಾಗಿ ದಾಳಿ ಮತ್ತು ಬೆದರಿಕೆ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಇಂತಹ ಘಟನೆಗಳಿಂದಾಗಿ ಕ್ರೈಸ್ತ ಸಮುದಾಯವು ತಮ್ಮ ಮನೆಗಳಲ್ಲಿ ನಡೆಸುತ್ತಿದ್ದ ಸಾಂಪ್ರದಾಯಿಕ ಪ್ರಾರ್ಥನಾ ಸಭೆಗಳನ್ನು ಕೂಡ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕಾಗಿದ್ದು, ಯಾವುದೇ ಧರ್ಮದವರ ಮೇಲಾದರೂ ದಾಳಿ ನಡೆದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತರ ಮೇಲಿನ ದಾಳಿಗಳನ್ನು ತಕ್ಷಣ ನಿಯಂತ್ರಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಚಾರ್ಲ್ಸ್ ಅಂಬ್ಲರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.






