ಉತ್ತಮ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪತ್ರಿಕೆ ಓದುವುದು, ಹೊಸ ತಂತ್ರಜ್ಞಾನದ ಅರಿಯುವ ಹವ್ಯಾಸ ಮೈಗೂಡಿಸಕೊಳ್ಳಬೇಕು ಎಂದು ಶ್ರೀ ಸದ್ಗುರು ಸಿದ್ಧರೂಢ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ನಾಗಪ್ಪ ಜಾನಕನೋರ ಹೇಳಿದರು.
ಈದಿನ ಡಾಟ್ ಕಾಮ್ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾದ ಸಾಮಾಜಿಕ ಮಾಧ್ಯಮ ಮತ್ತು ವಿದ್ಯಾರ್ಥಿಗಳು ಕುರಿತು ನಡೆದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, “ಪತ್ರಿಕೋದ್ಯಮ ಸವಾಲಿನ ಕೆಲಸವಾಗಿದೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಧ್ಯಮ ಮಾಡುತ್ತಿದೆ. ನೊಂದವರ ನೋವಿಗೆ ಧ್ವನಿಯಾಗುವ ಮೂಲಕ ಜನಪರ ಪತ್ರಿಕೋದ್ಯಮ ಇಂದಿನ ಅಗತ್ಯವಿದೆ” ಎಂದರು.
ಸಾಮಾಜಿಕ ಚಿಂತಕ ಜಗದೀಶ್ವರ ಬಿರಾದರ್ ಮಾತನಾಡಿ, “ದೇಶದಲ್ಲಿ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಕೊಡುಗೆ ಅನನ್ಯ. ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕಾರಂಗ ತನ್ನ ಸ್ವರೂಪ ಬದಲಾಯಿಸಿಕೊಂಡು ಮುನ್ನಡೆಯುತ್ತಿದೆ. ಅದಕ್ಕೆ ತಕ್ಕಂತೆ ಯುವ ಸಮೂಹ ಓದು-ಬರಹದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳು ಅತ್ಯಂತ ಜಾಗರೂಕತೆಯಿಂದ ಬಳಸಬೇಕು” ಎಂದು ಸಲಹೆ ನೀಡಿದರು.
ಪತ್ರಕರ್ತ ಬಾಲಾಜಿ ಕುಂಬಾರ ವಿಶೇಷ ಉಪನ್ಯಾಸ ನೀಡಿದ ಅವರು,”ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಮಾಧ್ಯಮಗಳ ಕೊಡುಗೆ ಅಪಾರವಾಗಿತ್ತು. ಬದಲಾದ ತಂತ್ರಜ್ಞಾನದಿಂದಾಗಿ ಡಿಜಿಟಲ್ ಮಾಧ್ಯಮ ತೀವ್ರವಾಗಿ ಬೆಳೆಯುತ್ತಿದೆ. ಕೈಯಲ್ಲಿರುವ ಸ್ಮಾರ್ಟ್ಫೋನ್ ಬಳಕೆಯಿಂದ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾಲ ಇದಾಗಿದೆ” ಎಂದರು.
“ಸಮಾಜದಲ್ಲಿ ಇಂದಿಗೂ ಅನೇಕ ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಜನರ ಜೀವನಮಟ್ಟ ಸುಧಾರಣೆಯಾಗಿಲ್ಲ. ಸಮಾಜದ ಜಟಿಲ ಸಮಸ್ಯೆಗಳಿಗೆ ಮಾಧ್ಯಮ ದನಿಯಾಗಿ ಬೆಳಕಾಗಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮಾಜದ ಬಗ್ಗೆ ಕಳಕಳಿ ಹೊಂದಬೇಕು” ಎಂದು ಹೇಳಿದರು.
ಪ್ರಾಧ್ಯಾಪಕ ಡಾ.ಸಂಗಪ್ಪ ತೌಡಿ ಮಾತನಾಡಿ, “ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು, ಮೌಲ್ಯ ಶಿಕ್ಷಣದೊಂದಿಗೆ ಶಿಸ್ತು, ಧೈರ್ಯ, ತಾಳ್ಮೆ ಬೆಳೆಸಿಕೊಳ್ಳಬೇಕು. ಪತ್ರಿಕೋದ್ಯಮ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ಅನೇಕ ಉತ್ತಮ ಅವಕಾಶಗಳಿವೆ. ಪ್ರಚಲಿತ ಘಟನೆಗಳ ಬಗ್ಗೆ ಅರಿತುಕೊಳ್ಳಲು ಹೆಚ್ಚಿನ ಓದು ಮುಖ್ಯವಾಗಿದೆʼ ಎಂದರು.
ಇದನ್ನೂ ಓದಿ : ಬೀದರ್ | 371(ಜೆ) ಜಾರಿಯಾದರೂ ಕಲ್ಯಾಣ ಕರ್ನಾಟಕ ʼಚಹರೆʼ ಬದಲಾಗಲಿಲ್ಲ
ಕಾರ್ಯಗಾರದಲ್ಲಿ ಕಾಲೇಜಿನ ಉಪನ್ಯಾಸಕರಾದ ಈಶ್ವರ ರೆಡ್ಡಿ, ರಾಜಶೇಖರ ಸಜ್ಜನ್, ನಟರಾಜ ಸುತಾರ, ದೇವೇಂದ್ರ ಪೂಜಾರಿ, ಮಂಗಲ ಲಕ್ಕಶೆಟ್ಟಿ, ರಾಜಮ್ಮ ನೆಳಗೆ, ರಾಖಿ ಕಾಡಗೆ, ಸಪ್ನಾ ಸ್ವಾಮಿ, ಶ್ವೇತಾ, ವಿಜಯಲಕ್ಷ್ಮಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





