ಬೀದರ್ ಜಿಲ್ಲೆಯ ಯಾವುದೇ ವ್ಯಕ್ತಿ ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಲಸೆ ಪ್ರಕರಣಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಕುಡಿಯುವ ನೀರಿನ ಸಮಸ್ಯೆ, ವಿಬಿ-ಜಿ ರಾಮ್ ಜಿ ಹಾಗೂ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ವಿಬಿ-ಜಿ ರಾಮ್ ಜಿ ಯೋಜನೆಯಡಿ ವೈಯಕ್ತಿಕ ಹಾಗೂ ಗುಂಪು ಆಧಾರಿತ ಕೆಲಸಗಳ ಮೂಲಕ ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸಿ ಗ್ರಾಮೀಣರಿಗೆ ಉದ್ಯೋಗ ಒದಗಿಸಬೇಕು. ಕೆಲಸಕ್ಕಾಗಿ ಬರುವವರಿಗೆ ತಕ್ಷಣ ಜಾಬ್ ಕಾರ್ಡ್ ನೀಡಿ ಉದ್ಯೋಗ ಕಲ್ಪಿಸುವ ಮೂಲಕ ವಲಸೆ ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಅಗತ್ಯ ಪುಸ್ತಕಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಉತ್ತಮ ಓದು ವಾತಾವರಣ ನಿರ್ಮಿಸಬೇಕು” ಎಂದರು.
ಜಿಲ್ಲೆಯ 644 ಗ್ರಾಮಗಳನ್ನು ‘ಹರ್ ಘರ್ ಜಲ್’ ಗ್ರಾಮಗಳೆಂದು ಘೋಷಿಸಿರುವುದಷ್ಟೇ ಸಾಕಾಗುವುದಿಲ್ಲ. ಪ್ರತಿಯೊಂದು ಮನೆಗೂ ನಿರಂತರವಾಗಿ ಕುಡಿಯುವ ನೀರು ತಲುಪುತ್ತಿದೆಯೇ ಎಂಬುದನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ಜಂಟಿಯಾಗಿ ಪರಿಶೀಲಿಸಬೇಕು. ಸಮಸ್ಯೆಗಳಿದ್ದಲ್ಲಿ 15 ದಿನಗಳೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು.
ಜಿಲ್ಲೆಯಲ್ಲಿ ಡಿಎಪಿ ಹಾಗೂ ಇತರೆ ರಸಗೊಬ್ಬರಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ರೈತರು ಬೆಳೆ ವಿಮೆ ನೋಂದಣಿಗಾಗಿ ಬಂದಾಗ ಯಾವುದೇ ಕಾರಣಕ್ಕೂ ಹಿಂದಿರುಗಿಸದೆ ನೋಂದಣಿ ಸೌಲಭ್ಯ ಕಲ್ಪಿಸಬೇಕು. ಈ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ಗ್ರಾಮ ಒನ್’ ಕೇಂದ್ರಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
“ರೈತರು ನಮ್ಮ ದೇಶದ ಬೆನ್ನೆಲುಬು. ರೈತನಿಗೆ ಉತ್ತಮ ರಸ್ತೆ ಸೌಲಭ್ಯ ಕಲ್ಪಿಸುವುದು ಎಂದರೆ ಕೃಷಿಗೆ ಮತ್ತಷ್ಟು ಬಲ ತುಂಬಿದಂತೆ. ರೈತರ ಜಮೀನುಗಳಿಗೆ ಸಂಪರ್ಕ ರಸ್ತೆ ನಿರ್ಮಿಸಲು ‘ನಮ್ಮ ಹೊಲ–ನಮ್ಮ ದಾರಿ’ ಯೋಜನೆಯಡಿ ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕು. ಅಗತ್ಯವಿರುವ ಕಡೆ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು” ಎಂದರು.
ಉತ್ತಮ ರಸ್ತೆಗಳಿದ್ದರೆ ಕೃಷಿ ಚಟುವಟಿಕೆಗಳು ಸುಗಮವಾಗುತ್ತವೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ಸಾಗಿಸಿ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತದೆ. ರೈತರ ಅಭಿವೃದ್ಧಿಯೇ ನಮ್ಮ ಸರ್ಕಾರದ ಆದ್ಯತೆ. ರೈತನ ಬದುಕು ಸುಲಭಗೊಳಿಸುವ ಪ್ರತಿಯೊಂದು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ : ಔರಾದ್ | ಪತ್ರಕರ್ತರು ಸಮಾಜದ ಕಣ್ಣು, ಕಿವಿಯಾಗಿ ಕಾರ್ಯನಿರ್ವಹಿಸಲಿ : ಶಾಸಕ ಪ್ರಭು ಚವ್ಹಾಣ
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

