ಪ್ರತಿ ವರ್ಷ ಜುಲೈ 29ರಂದು ಇಡೀ ಜಗತ್ತು ವಿಶ್ವ ಹುಲಿ ದಿನವನ್ನು ಆಚರಿಸುತ್ತದೆ. ಆದರೆ ಭಾರತಕ್ಕೆ ಈ ದಿನದ ಮಹತ್ವ ಇನ್ನೂ ವಿಶೇಷ. ಏಕೆಂದರೆ ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ ಮಾತ್ರವಲ್ಲ, ಟಿಪ್ಪು ಸುಲ್ತಾನನ ಶೌರ್ಯದಿಂದ ಹಿಡಿದು ನೇತಾಜಿ ಬೋಸ್‌ನ ಸ್ವಾತಂತ್ರ್ಯ ಹೋರಾಟದವರೆಗೆ ಹುಲಿ ನಮ್ಮ ಇತಿಹಾಸದ ಪ್ರತಿಯೊಂದು ಅಧ್ಯಾಯದಲ್ಲೂ ಇದೆ.
ರಾಜಪ್ರಭುತ್ವದಲ್ಲಿ ಟಿಪ್ಪು ಸುಲ್ತಾನ್ 18ನೇ ಶತಮಾನದಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿಗೆ ನೇರ ಸವಾಲೊಡ್ಡಿದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಅವರನ್ನು ಇತಿಹಾಸ ಮೈಸೂರಿನ ಹುಲಿ ಎಂದು ಗುರುತಿಸಿದೆ.
ಟಿಪ್ಪುವಿಗೆ ಹುಲಿ ಕೇವಲ ಚಿಹ್ನೆಯಾಗಿರಲಿಲ್ಲ. ಅದು ಆತನ ಆಡಳಿತದ ಆತ್ಮವಾಗಿತ್ತು. ಆತನ ಕತ್ತಿ ಬಾಬ್ರಿ, ಬಂದೂಕು, ನಾಣ್ಯ, ಯುದ್ಧದ ಡೇರೆ, ಅರಮನೆಯ ಗೋಡೆ ಮತ್ತು ನೌಕಾಪಡೆಯ ಧ್ವಜ ಎಲ್ಲದರ ಮೇಲೂ ಹುಲಿಯ ಪಟ್ಟೆ ಮತ್ತು ಹುಲಿಯ ತಲೆಯ ಚಿಹ್ನೆ ಇತ್ತು. ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿರುವ ಪ್ರಸಿದ್ಧ ಟಿಪ್ಪುವಿನ ಹುಲಿ ಯಂತ್ರ ಇದಕ್ಕೆ ಸಾಕ್ಷಿ. ಅದರಲ್ಲಿ ಹುಲಿಯೊಂದು ಬ್ರಿಟಿಷ್ ಸೈನಿಕನನ್ನು ಹರಿದು ತಿನ್ನುವಂತೆ ಯಾಂತ್ರಿಕ ವಿನ್ಯಾಸವಿತ್ತು. ನೂರು ವರ್ಷ ಕುರಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಮೇಲು ಎಂದು ಘೋಷಿಸಿದ ಟಿಪ್ಪು, ಹುಲಿಯ ಛಲದಿಂದಲೇ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳನ್ನು ನಡೆಸಿ ಬ್ರಿಟಿಷರಿಗೆ ಸಂಕಟ ತಂದರು.
ಸ್ವಾತಂತ್ರ್ಯ ಹೋರಾಟದ ಮತ್ತೊಬ್ಬ ಧೀರ ನೇತಾಜಿ ಸುಭಾಷ್ ಚಂದ್ರ ಬೋಸ್ ಕೂಡ ಹುಲಿಯನ್ನು ತಮ್ಮ ಹೋರಾಟದ ಸಂಕೇತವಾಗಿಸಿಕೊಂಡರು. 1943ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಸೇನೆ(INA)ಯ ಅಧಿಕೃತ ಬಾವುಟದ ಮಧ್ಯದಲ್ಲಿ ಮುನ್ನುಗ್ಗುತ್ತಿರುವ ಹುಲಿಯ ಚಿತ್ರವಿತ್ತು. ಆ ಹುಲಿ ಬಾವುಟದ ಕೆಳಗೆ ಜೈ ಹಿಂದ್, ದಿಲ್ಲಿ ಚಲೋ ಎಂದು ಘೋಷಿಣೆ ಮಾಡುತ್ತ ಸಾವಿರಾರು ಯುವಕರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಹೋದರು. ಹೀಗೆ ಟಿಪ್ಪುವೂ, ಬೋಸ್‌ರೂ ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ಮಾರ್ಗವಾದರೂ ಉದ್ದೇಶ ಒಂದೇ… ಅದು ಶತ್ರು ಬ್ರಿಟಿಷರ ವಿರುದ್ಧ ಹುಲಿಯಂತೆ ಗುಡುಗಿದರು.
ಹುಲಿ ಹೇಗೆ ಭಾರತದ ರಾಷ್ಟ್ರೀಯ ಪ್ರಾಣಿಯಾಯಿತು?
ಸ್ವಾತಂತ್ರ್ಯದ ನಂತರ 1969ರವರೆಗೆ ಸಿಂಹ ಭಾರತದ ರಾಷ್ಟ್ರೀಯ ಪ್ರಾಣಿಯಾಗಿತ್ತು. ಆದರೆ ಸಿಂಹವು ಗುಜರಾತ್‌ನ ಗಿರ್‌ನಲ್ಲಿ ಮಾತ್ರ ಕಂಡುಬರುತ್ತಿತ್ತು.
1972ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದಲ್ಲಿ ʼಪ್ರಾಜೆಕ್ಟ್ ಟೈಗರ್ʼ ಯೋಜನೆಗೆ ಚಾಲನೆ ದೊರೆಯಿತು. ಅದೇ ವರ್ಷ ನವದೆಹಲಿಯಲ್ಲಿ ನಡೆದ ಭಾರತೀಯ ವನ್ಯಜೀವಿ ಮಂಡಳಿ – ಇಂಡಿಯಾ ಬೋರ್ಡ್ ಫಾರ್ ವೈಲ್ಡ್ ಲೈಫ್ ಸಭೆಯಲ್ಲಿ ನಿರ್ಣಾಯಕ ನಿರ್ಧಾರವಾಯಿತು.
ಹುಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಇಡೀ ಭಾರತದಲ್ಲಿ ಕಂಡುಬರುತ್ತದೆ. ದುರ್ಗಾ ದೇವಿಯ ವಾಹನ, ರಾಜರ ಲಾಂಛನ, ಜಾನಪದದಲ್ಲಿ ವಿಶೇಷ ಸ್ಥಾನದಲ್ಲಿ ಸಾಂಸ್ಕೃತಿಕ ಮಹತ್ವವಿದೆ. ಪರಿಸರ ಸೂಚಕವಾಗಿ ಹುಲಿ ಇರುವ ಕಾಡು ಆರೋಗ್ಯಕರ ಕಾಡು. ಆಹಾರ ಸರಪಳಿಯ ಮೇಲ್ಭಾಗದಲ್ಲಿರುವುದರಿಂದ ಪರಿಸರ ಸಮತೋಲನ ಕಾಪಾಡುತ್ತದೆ. ಈ ಆಧಾರಗಳ ಮೇಲೆ 1973ರ ಏಪ್ರಿಲ್ 1ರಿಂದ ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ವಿಶ್ವ ಹುಲಿ ದಿನ ಆಚರಣೆ ಹುಟ್ಟಿದ್ದು ಹೇಗೆ?
ಜಗತ್ತಿನಲ್ಲಿ 1900ರ ವೇಳೆಗೆ ಒಂದು ಲಕ್ಷ ಇದ್ದ ಹುಲಿಗಳ ಸಂಖ್ಯೆ 2010ರ ಹೊತ್ತಿಗೆ 3,200ಕ್ಕೆ ಇಳಿದಿತ್ತು. ಈ ಆತಂಕದ ಹಿನ್ನೆಲೆಯಲ್ಲಿ 2010ರ ನವೆಂಬರ್‌ನಲ್ಲಿ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ 13 ಹುಲಿ ಇರುವ ದೇಶಗಳ ಶೃಂಗಸಭೆ ನಡೆಯಿತು. ಈ ಸಭೆಯಲ್ಲಿ “TX2” ಗುರಿ ಘೋಷಿಸಲಾಯಿತು. ಅಂದರೆ 2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು. ಅದೇ ಸಭೆಯಲ್ಲಿ ಪ್ರತಿ ವರ್ಷ ಜುಲೈ 29ರಂದು ವಿಶ್ವ ಹುಲಿ ದಿನವನ್ನಾಗಿ ತೀರ್ಮಾನಿಸಲಾಯಿತು. ಈ ದಿನದಂದು ಸರ್ಕಾರಗಳು, ಅರಣ್ಯ ಇಲಾಖೆ, NGOಗಳು ಹುಲಿ ಸಂರಕ್ಷಣೆ, ಆವಾಸಸ್ಥಾನ ರಕ್ಷಣೆ, ಬೇಟೆ ವಿರೋಧಿ ಅಭಿಯಾನಗಳನ್ನು ನಡೆಸುತ್ತವೆ. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ.
ಕರ್ನಾಟಕ ಹುಲಿಗಳ ನಾಡು. ಕರ್ನಾಟಕವು ಹೆಮ್ಮೆಯಿಂದ ನಿಲ್ಲುತ್ತದೆ. ಬಂಡೀಪುರ, ನಾಗರಹೊಳೆ, ಭದ್ರಾ ಅರಣ್ಯಗಳಲ್ಲಿ 2022ರ NTCA ಜನಗಣತಿಯ ಪ್ರಕಾರ 563 ಹುಲಿಗಳಿವೆ. ಮಧ್ಯಪ್ರದೇಶದ ನಂತರ ದೇಶದಲ್ಲೇ 2ನೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ನಮ್ಮದು, ಇದು ನಮ್ಮ ರಾಜ್ಯದ ಹಿರಿಮೆ.
ಟಿಪ್ಪು ಹುಲಿಯ ಚಿಹ್ನೆಯನ್ನು ಗೌರವಿಸಿ ಹೋರಾಡಿದರು .
ಬೋಸ್ ಹುಲಿಯ ಬಾವುಟವನ್ನು ಹಿಡಿದು ಹೋರಾಡಿದರು.
ಇಂದಿರಾ ಗಾಂಧಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿದರು.
ಇಂದು ಇಡೀ ಜಗತ್ತು ಜುಲೈ 29ರಂದು ಹುಲಿಯನ್ನು ಉಳಿಸಲು ಸಂಕಲ್ಪಮಾಡುತ್ತದೆ.
ಇದನ್ನೂ ಓದಿದ್ದೀರಾ? ವಿಜಯನಗರ ವಿವಿ ಶುಲ್ಕ ಏರಿಕೆ: ಹಣ ತುಂಬಲಾಗದ ಬಡ ಮಕ್ಕಳ ಅಳಲು ಕೇಳುವರಾರು?
ಹುಲಿ ಬದುಕಿದರೆ ಕಾಡು ಬದುಕುತ್ತದೆ. ಕಾಡು ಬದುಕಿದರೆ ಮನುಷ್ಯ ಬದುಕುತ್ತಾನೆ. ಈ ವಿಶ್ವ ಹುಲಿ ದಿನದಂದು ನಾವೆಲ್ಲರೂ ಅರಣ್ಯ ಉಳಿಸುವ, ಬೇಟೆ ವಿರೋಧಿಸುವ ಪ್ರತಿಜ್ಞೆ ಮಾಡೋಣ.





