ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರನ ಶವ ಮರುದಿನ ಸಮುದ್ರ ತೀರದಲ್ಲಿ ಪತ್ತೆಯಾದ ಘಟನೆ ಭಟ್ಕಳ ತಾಲೂಕಿನ ಮುಂಡಳ್ಳಿ ಸಮೀಪದ ಮೋಗೇರಕೇರಿ ಅಳವೇಬಾಯಿ ಸಮುದ್ರ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಜಾಲಿಕೋಡಿ, ಜಾಲಿ ನಿವಾಸಿ ಮಂಜುನಾಥ ಬೇಟ್ಯಾ ಮೋಗೇರ (57) ಎಂದು ಗುರುತಿಸಲಾಗಿದೆ. ಜುಲೈ 28ರಂದು ಮಧ್ಯಾಹ್ನ ಸುಮಾರು 1.30 ಗಂಟೆಗೆ ಮಂಜುನಾಥ ಅವರು ಪಾತಿ ದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು.
ಈ ಸುದ್ದಿ ಓದಿದ್ದೀರಾ? ಬನವಾಸಿ | ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶಕ್ಕೆ; ಮಹೇಂದ್ರ ಸುಪ್ರೊ ವಾಹನ ಜಪ್ತಿ
ಈ ವೇಳೆ ಏಕಾಏಕಿ ಉಂಟಾದ ಭಾರಿ ಅಲೆಯ ಹೊಡೆತಕ್ಕೆ ದೋಣಿ ಮುಳುಗಿದ್ದು, ಅವರು ಸಮುದ್ರದ ಆಳವಾದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಬುಧವಾರ (ಜು.29) ಬೆಳಗ್ಗೆ ಸುಮಾರು 6.15 ಗಂಟೆಗೆ ಮುಂಡಳ್ಳಿ ಗ್ರಾಮದ ಮೋಗೇರಕೇರಿ ಸಮುದ್ರ ತೀರದಲ್ಲಿ ಅವರ ಶವ ಪತ್ತೆಯಾಗಿದೆ.
ಮೃತರ ಪುತ್ರ ಓಂಪ್ರಕಾಶ ಮೋಗೇರ ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (ಯುಡಿಆರ್) ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಮೃತರ ಸಾವಿನ ಕುರಿತು ಯಾವುದೇ ಅನುಮಾನ ಇಲ್ಲ ಎಂದು ತಿಳಿಸಲಾಗಿದ್ದು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





