AI ತಂತ್ರಜ್ಞಾನವು ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುವ ಸಾಧ್ಯತೆಯಿದ್ದು, ಉದ್ಯೋಗ ನಷ್ಟದ ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಭಾರತದ ಪ್ರಮುಖ ಸಾಫ್ಟ್ವೇರ್ ಮತ್ತು ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಜೊಹೊ (Zoho) ಸಂಸ್ಥಾಪಕ ಶ್ರೀಧರ್ ವೆಂಬು ಎಚ್ಚರಿಸಿದ್ದಾರೆ. ಕಂಪ್ಯೂಟರ್ನಲ್ಲಿ ನಿರ್ವಹಿಸುವ ಕೆಲಸಗಳನ್ನು AI ನೆರವಿನಿಂದ ಒಬ್ಬ ನುರಿತ ವ್ಯಕ್ತಿಯೇ ಹಿಂದೆ 10 ಮಂದಿ ಮಾಡುತ್ತಿದ್ದಷ್ಟು ಪ್ರಮಾಣದಲ್ಲಿ ಪೂರ್ಣಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೆಂಬು, ಕಂಪ್ಯೂಟರ್ ಆಧಾರಿತ ಕೆಲಸಗಳಲ್ಲಿ ತೊಡಗಿರುವವರಿಗೆ ಎಐನಿಂದ ಉಂಟಾಗಬಹುದಾದ ಉದ್ಯೋಗದ ಅಪಾಯ ಈಗ ಹೆಚ್ಚು ಸ್ಪಷ್ಟವಾಗುತ್ತಿದೆ. ಆದರೆ, ಇದರಿಂದ ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಶೇ.90ರಷ್ಟು ಮಂದಿ ನಿರುದ್ಯೋಗಿಗಳಾಗುತ್ತಾರೆ ಎಂದರ್ಥವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಎಐ ತಂತ್ರಜ್ಞಾನವು ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸಗಳನ್ನು ನಿರ್ವಹಿಸಲು ನೆರವಾಗುವುದರಿಂದ, ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಈ ಹಿಂದೆ ಹೆಚ್ಚಿನ ವೆಚ್ಚದ ಕಾರಣಕ್ಕೆ ಕೆಲವು ಕೆಲಸಗಳಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಗದಿದ್ದ ಸಂಸ್ಥೆಗಳು, ಈಗ ಹೊಸ ನೇಮಕಾತಿಗಳಿಗೆ ಮುಂದಾಗಬಹುದು ಎಂದು ವೆಂಬು ವಿವರಿಸಿದ್ದಾರೆ.
ಎಐ ಬಳಕೆಯಿಂದ ಕೆಲಸದ ಸಮಯ ಮತ್ತು ಸಂಪನ್ಮೂಲಗಳ ವೆಚ್ಚ ಕಡಿಮೆಯಾದರೆ, ಸಣ್ಣ ಉದ್ಯಮಗಳಿಗೂ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಪಡೆಯುವುದು ಸುಲಭವಾಗಲಿದೆ. ಇದರಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಉದ್ಯೋಗಾವಕಾಶಗಳ ಹಂಚಿಕೆ ಬದಲಾಗಬಹುದು ಎಂದು ಅವರು ಹೇಳಿದ್ದಾರೆ.
ಎಐನಿಂದ ಉತ್ಪಾದಕತೆ ಹೆಚ್ಚಿದ ಮಾತ್ರಕ್ಕೆ ಬಹುಪಾಲು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಅರ್ಥೈಸಬಾರದು. ಉದಾಹರಣೆಗೆ, ಸಾಫ್ಟ್ವೇರ್ ಎಂಜಿನಿಯರ್ಗಳನ್ನು ಅಥವಾ ಡಿಜಿಟಲ್ ಮಾರ್ಕೆಟಿಂಗ್ ಪರಿಣತರನ್ನು ನೇಮಿಸಿಕೊಳ್ಳಲು ಈ ಹಿಂದೆ ಸಾಧ್ಯವಾಗದಿದ್ದ ಸಣ್ಣ ಉದ್ಯಮಗಳು, ಎಐ ನೆರವಿನಿಂದ ಕೆಲಸದ ವೆಚ್ಚ ಕಡಿಮೆಯಾದ ಬಳಿಕ ಅಂತಹ ವೃತ್ತಿಪರರನ್ನು ನೇಮಿಸಿಕೊಳ್ಳಬಹುದು. ಇದರಿಂದ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಎಐ ತಂತ್ರಜ್ಞಾನದ ಬೆಳವಣಿಗೆಯಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಮರುಹೊಂದಾಣಿಕೆ ನಡೆಯಲಿದೆ ಎಂದು ಶ್ರೀಧರ್ ವೆಂಬು ಎಚ್ಚರಿಸಿದ್ದಾರೆ. ಈ ಬದಲಾವಣೆಯ ಅವಧಿಯಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕ, ಹೊಸ ಕೌಶಲಗಳನ್ನು ಕಲಿಯುವ ಅನಿವಾರ್ಯತೆ ಮತ್ತು ಬೇರೆ ವೃತ್ತಿಗಳಿಗೆ ಹೊಂದಿಕೊಳ್ಳುವ ಸವಾಲುಗಳು ಎದುರಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್ಗಳಲ್ಲೂ ಆಕಾಂಕ್ಷಿಗಳ ಅಬ್ಬರ!
ಕೆಲವು ಕೆಲಸಗಳಿಗೆ ಬೇಡಿಕೆ ಕಡಿಮೆಯಾಗಬಹುದು. ಅದೇ ಸಮಯದಲ್ಲಿ ಎಐ ಬಳಕೆ, ತಂತ್ರಜ್ಞಾನ ನಿರ್ವಹಣೆ ಹಾಗೂ ಹೊಸ ಸೇವೆಗಳಿಗೆ ಸಂಬಂಧಿಸಿದ ಕೌಶಲಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಉದ್ಯೋಗಿಗಳು ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅಗತ್ಯವಾಗಿದೆ.
ಸಾಂಪ್ರದಾಯಿಕ ಮತ್ತು ಪುನರಾವರ್ತಿತ ಕಂಪ್ಯೂಟರ್ ಕೆಲಸಗಳಿಗೆ ಬೇಡಿಕೆ ತಗ್ಗಿದರೂ ಎಐ ತಂತ್ರಜ್ಞಾನ ನಿರ್ವಹಣೆ, ಎಐ ಆಧಾರಿತ ಸೇವೆಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ರೂಪಿಸುವ ನೂತನ ಕೌಶಲಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಶ್ರೀಧರ್ ವೆಂಬು ಅವರು ಹೇಳಿರುವ ಸಂದೇಶ ಕೂಡ ಉದ್ಯೋಗ ಮಾರುಕಟ್ಟೆಯ ಬದಲಾವಣೆಗೆ ಸಿದ್ಧರಾಗಲು ನೀಡಿರುವ ಕರೆ. ಎಐ ತಂತ್ರಜ್ಞಾನವು ನೌಕರರನ್ನು ಸಂಪೂರ್ಣವಾಗಿ ವಜಾಗೊಳಿಸುವ ಬದಲಿಗೆ, ‘ಉದ್ಯೋಗದ ಸ್ವರೂಪ’ (Nature of Jobs) ವನ್ನು ಬದಲಾಯಿಸಲಿದೆ. ಮುಂಬರುವ ದಿನಗಳಲ್ಲಿ ಎಐ ತಂತ್ರಜ್ಞಾನವನ್ನು ತಮ್ಮ ಕೆಲಸದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವೃತ್ತಿಪರರು ಮಾತ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯ.
AI ನಿಂದ ಉದ್ಯೋಗ ನಷ್ಟದ ಅಪಾಯ ಹೆಚ್ಚಳ; ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಅನಿವಾರ್ಯ ಎಂದ ಉದ್ಯಮಿ





