ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹತ್ವಾಕಾಂಕ್ಷೆಯ ‘ಖೇತ್ ಬಚಾವೋ’ (ಕೃಷಿ ಉಳಿಸಿ) ಅಭಿಯಾನದ ಅಂಗವಾಗಿ ಬೀದರ ತಾಲೂಕಿನ ಚೌಂಡಿ ಗ್ರಾಮದಲ್ಲಿ ಪ್ರಗತಿಪರ ರೈತ ಮಹಿಳೆ ಪೂಜಾ ಸಂತೋಷ ಧೂಮನ್‌ಸುರೆ ಅವರ ತೋಟದಲ್ಲಿ ಕೃಷಿ ಜಾಗೃತಿ ಹಾಗೂ ತಾಂತ್ರಿಕ ಸಲಹಾ ಕಾರ್ಯಕ್ರಮ ಜರುಗಿತು.
ಐಸಿಎಆರ್-ಆಟಾರಿ ಬೆಂಗಳೂರು ಇವರ ನಿರ್ದೇಶನದಂತೆ, ಬೀದರ್ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಹಾಗೂ ಕೃಷಿ ಇಲಾಖೆಯ ಜಂಟಿ ಸಹಯೋಗದಲ್ಲಿ ಜೂನ್ 30ರವರೆಗೆ ಈ ಬೃಹತ್ ಆಂದೋಲನ ನಡೆಯಲಿದೆ. ಪ್ರಸ್ತುತ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದ್ದು, ಇದನ್ನು ತಡೆಗಟ್ಟುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ರಾಜಶೇಖರ್ ಬಸನಾಯಕ ತಿಳಿಸಿದ್ದಾರೆ.
“ಮಣ್ಣಿನ ಆರೋಗ್ಯವೇ ದೇಶದ ಸಂಪತ್ತು. ಜಿಲ್ಲೆಯ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿ, ವಿಜ್ಞಾನಿಗಳ ತಾಂತ್ರಿಕ ಸಲಹೆಗಳನ್ನು ಪಡೆದು ತಮ್ಮ ಜಮೀನಿನ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಚಂದ್ರಕಾಂತ ಮಾತನಾಡಿ, “ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ, ಅದರ ಆಧಾರದ ಮೇಲೆ ಸಮತೋಲಿತ ರಸಗೊಬ್ಬರಗಳನ್ನು ಬಳಸಬೇಕು. ಸಮಗ್ರ ಪೋಷಕಾಂಶ ನಿರ್ವಹಣೆ, ಹಸಿರು ಗೊಬ್ಬರ ಹಾಗೂ ಸಾವಯವ, ಜೈವಿಕ ಗೊಬ್ಬರಗಳ ಬಳಕೆಯಿಂದ ಮಾತ್ರ ಮಣ್ಣಿನ ಆರೋಗ್ಯವನ್ನು ದೀರ್ಘಕಾಲ ಕಾಪಾಡಲು ಸಾಧ್ಯ” ಎಂದು ಮಾಹಿತಿ ನೀಡಿದರು.
ಸಸ್ಯ ಸಂರಕ್ಷಣೆ ತಜ್ಞ ಡಾ.ಶಿವಕುಮಾರ್ ಮಾತನಾಡಿ, “ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಿ ಹೆಚ್ಚಿನ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿಗಳು ಅತ್ಯಗತ್ಯ. ರೈತರು ಕೀಟ ಮತ್ತು ರೋಗ ಬಾಧೆಗಳ ನಿಯಂತ್ರಣಕ್ಕೆ ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಜೈವಿಕ ಹಾಗೂ ನೈಸರ್ಗಿಕ ಕೃಷಿ ಆಧಾರಿತ ಸಸ್ಯ ಸಂರಕ್ಷಣಾ ಉಪಾಯಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ದೇಶಾದ್ಯಂತ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯಡಿ, ಬೀದರ್ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗಗಳಲ್ಲಿ ಮುಂದಿನ 30 ದಿನಗಳ ಕಾಲ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡವು ಹಳ್ಳಿಗಳಿಗೆ ನೇರ ಭೇಟಿ ನೀಡಿ ರೈತರೊಂದಿಗೆ ನೇರ ಸಂವಾದ, ತಾಂತ್ರಿಕ ಸಲಹಾ ಶಿಬಿರಗಳು ಹಾಗೂ ಮಾಹಿತಿ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ ಎಂದರು.
ಇದನ್ನೂ ಓದಿ : ಹುಲಸೂರ | ಬಿರುಗಾಳಿ ಮಳೆ : ವಿದ್ಯುತ್ ತಂತಿ ಸ್ವರ್ಶಿಸಿ ಬಾಲಕ ಸಾವು
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗುರು ಬಸಯ್ಯಾ ಸ್ವಾಮಿ ಹಾಗೂ ರೈತರು ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.





