ಶಿಕ್ಷಕರು ವೃತ್ತಿನಿಷ್ಠೆಯನ್ನು ಬೆಳೆಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಮತ್ತು ಸಂಸ್ಕಾರವನ್ನು ನೀಡುವುದು ಇಂದಿನ ಕಾಲದಲ್ಲಿ ಅವಶ್ಯಕತೆ ಇದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರು ಅಲ್ಲಲ್ಲಿ ಮೌಡ್ಯತೆಯನ್ನು ಕಾಣುತ್ತಿರುವುದು ದುರಾದೃಷ್ಟಕರ. ಹಾಗಾಗಿ,ಶಿಕ್ಷಕರು ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಬೇಕು ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ತಿಳಿಸಿದರು.
ಬೀದರ್‌ನಲ್ಲಿ ಸಮಾಜ ಸೇವಾ ಸಮಿತಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಭಾಗೀರಥಿ ಕೊಂಡ ಮಾತನಾಡಿ, “ಎಲ್ಲ ವೃತ್ತಿಗಳಲ್ಲಿಯೇ ಶಿಕ್ಷಕರ ವೃತ್ತಿ ಪವಿತ್ರವಾದದ್ದು, ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಶಿಕ್ಷಕರು ನೈತಿಕ ಮೌಲ್ಯವನ್ನು ಕಳೆದುಕೊಳ್ಳದೆ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಮಕ್ಕಳಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ” ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಬೇಮಳಖೇಡದ ಸರ್ಕಾರಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲೆ ಗೀತಾ ಎಸ್. ಗಡ್ಡಿ, “ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಮ್ಮ ದೇಶದಲ್ಲಿ ಶ್ರೇಷ್ಠ ಶಿಕ್ಷಕರಾಗಿ ,ರಾಷ್ಟ್ರಪತಿಗಳಾಗಿ ಅಪರೂಪದ ಸೇವೆಯನ್ನು ಸಲ್ಲಿಸಿದ್ದಾರೆ, ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಸೂಚಿಸಿದ ಪ್ರಯುಕ್ತ ಪ್ರತಿ ವರ್ಷ ಶಿಕ್ಷಕರ ಸೇವೆಯನ್ನು ಸ್ಮರಿಸಿಕೊಂಡು ಈ ದಿನವನ್ನು ಆಚರಿಸಿಕೊಂಡು ಬರುತ್ತಿದ್ದೇವೆ” ಎಂದು ತಿಳಿಸಿದರು.
ಸಮಾಜ ಸೇವಾ ಸಮಿತಿ ಬೆಂಗಳೂರು ನ ಕಾರ್ಯದರ್ಶಿ ಬಿ ಎಂ ಶಶಿಕಲಾ ಮಾತನಾಡಿ, “ಕಳೆದ ಅನೇಕ ವರ್ಷಗಳಿಂದ ಸಮಾಜ ಸೇವಾ ಸಮಿತಿಯು ಸ್ತ್ರೀಯರಲ್ಲಿ ಜಾಗೃತಿಯನ್ನು ಉಂಟುಮಾಡುವ ಹತ್ತು ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದೆ, ಸಧೃಡ ಸಮಾಜ ನಿರ್ಮಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ. ಸಂಜೀವಕುಮಾರ್ ಅತಿವಾಳೆ ಮಾತನಾಡಿ, “ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಶಿಕ್ಷಕರಾಗಿ ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರನ್ನು ಗುರುತಿಸಿ ಸಮಾಜ ಸೇವಾ ಸಮಿತಿಯು ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ” ಎಂದು ಹೇಳಿದರು.
ಸಮಾಜ ಸೇವಾ ಸಮಿತಿ ಜಿಲ್ಲಾ ಸಂಚಾಲಕಿ ಮಹಾದೇವಿ ಬಿರಾದಾರ್ ಮಾತನಾಡಿ, “ಮಹಿಳೆಯರಿಗೆ ಕರಕುಶಲ ಕಲೆಗಳನ್ನು ಕಲಿಸಿಕೊಡುತ್ತ ಅವರ ಕಾಲ ಮೇಲೆ ಅವರು ಬದುಕನ್ನು ನಡೆಸುವಂತೆ ಮಾಡುವಲ್ಲಿ ಹಾಗೂ ಮಹಿಳೆಯರನ್ನು ಎಲ್ಲರಂಗದಲ್ಲಿ ಏಳಿಗೆ ಆಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಸಮಾಜ ಸೇವಾ ಸಮಿತಿಯು ನಿರಂತರವಾಗಿ ಸೇವೆ ಮಾಡುತ್ತಿದೆ” ಎಂದು ತಿಳಿಸಿದರು.
ಶಿಕ್ಷಕರಾದ ಸಿದ್ದಮ್ಮ ಹಳಕಾಯಿ, ನರಸಮ್ಮ ಪಾಟೀಲ, ಸಂಗೀತಾ ಶಂಕರ ಬಾಪುರೆ, ಸೂರ್ಯಕಾಂತ ನಿರ್ಣಾಕರ್ ಪ್ರಿಯಾ ಲಂಜವಾಡಕರ್, ಮುರಳಿನಾಥ ಮೇತ್ರೆ, ಲಕ್ಷ್ಮಿ ಚಂಪಾಕರ್, ಸುವರ್ಣ, ಇಂದುಮತಿ ಹತ್ತಿ, ಶೋಭಾ, ಸತ್ಯವತಿ, ಮೀನಾಕುಮಾರಿ, ಶೈಲಜಾ ನೆಲ್ಸನ್ ಇವರನ್ನು “ಉತ್ತಮ ಶಿಕ್ಷಕ ಪ್ರಶಸ್ತಿ ” ಪ್ರದಾನ ಮಾಡಲಾಯಿತು.
ಕೀರ್ತಿಲತಾ ಹೊಸಳೆ ಸ್ವಾಗತಿಸಿದರು ಶ್ರೀಲತಾ ಅತಿವಾಳೆ ನಿರೂಪಿಸಿದರು, ರಾಜಮ್ಮ ಚಿಕ್ಕಪೇಟೆ ವಂದಿಸಿದರು.