ಕಾರ್ಮಿಕರು, ಕೃಷಿಕರು ಮತ್ತು ಶ್ರಮಿಕರು ಸಮಾಜದ ಜೀವಾಳ. ಇವರ ಶ್ರಮದಿಂದಲೇ ಬದುಕು ನಡೆಯುತ್ತದೆ ಎಂಬ ಸಂದೇಶವನ್ನು ಬಸವಣ್ಣನವರ ಚಿಂತನೆ ಸಾರುತ್ತದೆ. ಪ್ರಜಾಪ್ರಭುತ್ವದ ಆಶಯಗಳನ್ನು ಪಾಲಿಸಬೇಕಾದ ದೇಶದಲ್ಲಿ ಇಂದು ಧರ್ಮೋಕ್ರಸಿಯ ಸವಾಲು ಎದುರಾಗಿದೆ. ಡೆಮಾಕ್ರಸಿ ಮತ್ತು ಧರ್ಮೋಕ್ರಸಿಯ ನಡುವೆ ಸಂಘರ್ಷ ನಡೆಯುತ್ತಿದ್ದು, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ದೃಢ ನಿರ್ಧಾರವನ್ನು ನಾವು ಕೈಗೊಳ್ಳಬೇಕು ಎಂದು ಚಲನಚಿತ್ರ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅಭಿಪ್ರಾಯಪಟ್ಟರು.
ಬಸವಕಲ್ಯಾಣದ ಹೊರವಲಯದಲ್ಲಿರುವ ಬಸವ ಮಹಾಮನೆಯಲ್ಲಿ ಆವರಣದಲ್ಲಿ ಶನಿವಾರ ನಡೆದ 25ನೇ ಕಲ್ಯಾಣ ಪರ್ವದ ರಜತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಕ್ರಾಂತಿ ನಡೆದ ಪುಣ್ಯಭೂಮಿಯಲ್ಲಿ ಕಲ್ಯಾಣ ಪರ್ವದ ರಜತ ಮಹೋತ್ಸವವನ್ನು ಉದ್ಘಾಟಿಸಿರುವುದು ತಮಗೆ ಮತ್ತೊಂದು ಜನ್ಮ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, 12ನೇ ಶತಮಾನದಲ್ಲಿ ಶರಣರೆಲ್ಲರೂ ಒಗ್ಗೂಡಿ ವಚನ ಕ್ರಾಂತಿ ನಡೆಸಿದ ಈ ನೆಲದಲ್ಲಿ ನಡೆಯುತ್ತಿರುವ ರಜತ ಮಹೋತ್ಸವ ಮತ್ತೊಂದು ಕ್ರಾಂತಿಗೆ ನಾಂದಿ ಹಾಡಬೇಕು ಎಂದರು.

ಬುದ್ಧ ಕಾಣದ ತುದಿಗಳನ್ನು ಬಸವಣ್ಣ ಕಂಡರು. ಬಸವಣ್ಣ ಕಂಡಿದ್ದಲ್ಲಿ ಕತ್ತಲೆ ಆವರಿಸಿತ್ತು. ಅದಕ್ಕೆ ಬೆಳಕು ತುಂಬಿದ ಅವರು, ಮಹಿಳೆಯರಿಗೆ ಅಪಾರ ಶಕ್ತಿ ನೀಡಿದರು. ಅದರ ಫಲವಾಗಿ ಇಂದು ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸುವ ಸ್ಥಾನಕ್ಕೆ ಬಂದಿದ್ದಾರೆ. ಬಸವಣ್ಣನವರ ಸಮಾನತೆಯ ಆಶಯಗಳನ್ನು ಮುಂದುವರಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಬಲ ತುಂಬುವ ಕೆಲಸವಾಗಬೇಕು ಎಂದು ಹೇಳಿದರು.
ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಬಸವ ತತ್ವದ ಪ್ರಸಾರ ಮತ್ತು ಚಿಂತನೆ ನಿರಂತರವಾಗಿ ನಡೆಯಬೇಕು. ಯಾರೊಬ್ಬರ ವೈಯಕ್ತಿಕ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಟೀಕೆ-ಟಿಪ್ಪಣಿಗಳನ್ನು ಮಾಡಬಾರದು. ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಸವತತ್ವವನ್ನು ವ್ಯಾಪಕ ಪ್ರಚಾರ ಮಾಡಬೇಕು. ಕೆಲವರು ಬಸವ ತತ್ವದ ಅನುಯಾಯಿಗಳಿಗೆ ಹಿಂದೂ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಆದರೆ, ನಾವು ಹಿಂದೂ ವಿರೋಧಿಗಳಲ್ಲ, ನಮ್ಮ ತತ್ವ ಮತ್ತು ಸಿದ್ಧಾಂತಗಳನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, “12ನೇ ಶತಮಾನದಲ್ಲಿ ಶರಣರು ಸಾರಿದ ತತ್ವಾದರ್ಶಗಳನ್ನು ಇಂದಿನ ಯುವಕ-ಯುವತಿಯರಿಗೆ ತಲುಪಿಸುವ ಉದ್ದೇಶದಿಂದ ಕಳೆದ 25 ವರ್ಷಗಳಿಂದ ಕಲ್ಯಾಣ ಪರ್ವ ಆಯೋಜಿಸಲಾಗುತ್ತಿದೆ. ಇಂದಿನ ಯುವಜನರು ಕಾಯಕದಿಂದ ವಿಮುಖರಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ. ಯುವಕ-ಯುವತಿಯರಲ್ಲಿ ಮೌಲ್ಯಗಳನ್ನು ಬೆಳೆಸಲು ವಚನ ಸಾಹಿತ್ಯದ ಅರಿವು ಅತ್ಯಗತ್ಯ” ಎಂದು ಹೇಳಿದರು.
“ಜಗತ್ತಿನ ಇತಿಹಾಸದಲ್ಲಿ 12ನೇ ಶತಮಾನದಲ್ಲಿ ಸಮಾನತೆಗಾಗಿ ನಡೆದ ಕಲ್ಯಾಣ ಕ್ರಾಂತಿ ಮಹತ್ವದ ಸ್ಥಾನ ಪಡೆದಿದೆ. ಪ್ರಸ್ತುತ ಜಗತ್ತಿನಲ್ಲಿ ಅರಾಜಕತೆ ಹೆಚ್ಚಾಗುತ್ತಿದ್ದು, ಯುದ್ಧಗಳು ನಡೆಯುತ್ತಿವೆ. ಮಹಿಳೆಯರು ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪಕ್ಕೆ ಈಗಾಗಲೇ 530 ಕೋಟಿ ಖರ್ಚಾಗಿದೆ. ಇನ್ನೂ 250 ಕೋಟಿ ಮಾರ್ಚ್ ಪೂರ್ವದಲ್ಲಿ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಡಾ.ಚನ್ನವೀರ ಶಿವಾಚಾರ್ಯ, ಬಸವಕುಮಾರ ಸ್ವಾಮಿ, ಸಿದ್ಧರಾಮೇಶ್ವರ ಸ್ವಾಮಿ, ಶಾಸಕ ಶರಣು ಸಲಗರ್, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ಸಿ.ಸೋಮಶೇಖರ್, ಕವಿತಾ ಮಿಶ್ರಾ, ಸೋಮಶೇಖರ ಪಾಟೀಲ್ ಗಾದಗಿ, ವಿಜಯಲಕ್ಷ್ಮಿ ಕೌಟಗೆ, ಬಸವರಾಜ ಬುಳ್ಳಾ, ಬಾಬಾ ವಾಲಿ, ಶಿವರಾಜ ನರಶೆಟ್ಟೆ, ವಿನೋದ ಅಪ್ಪೆ, ಸಂಜೀವಕುಮಾರ ಪಾಟೀಲ್, ರಾಜೇಂದ್ರ ಜೊನ್ನೆಕೇರಿ, ರವಿ ಕೋಳಕೂರ, ಶಂಕರಗೌಡ, ಶಶಿಕಾಂತ್ ದುರ್ಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ





