ಹುಲಸೂರ ಗ್ರಾಮ ಪಂಚಾಯಿತಿಗೆ ಪ್ರಕಟಿಸಿರುವ ಮೀಸಲಾತಿ ಹಾಗೂ ಮುಂದಿನ ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಯನ್ನು ತಡೆಹಿಡಿದು, ರಾಜ್ಯ ಸರ್ಕಾರ ಘೋಷಿಸಿರುವಂತೆ ಹುಲಸೂರು ಪಟ್ಟಣ ಪಂಚಾಯಿತಿಯನ್ನು ರಚಿಸಿ, ಪಟ್ಟಣ ಪಂಚಾಯಿತಿ ಚುನಾವಣೆಯನ್ನು ನಡೆಸಬೇಕು ಎಂದು ಹುಲಸೂರು ತಾಲೂಕಿನ ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ಬೀದರ್ ಜಿಲ್ಲಾಧಿಕಾರಿ ಹಾಗೂ ಹುಲಸೂರ ತಹಸೀಲ್ದಾರ್ ಅವರ ಹೆಸರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಿದರು.
ಬೀದರ್ ಜಿಲ್ಲೆಯ ಹುಲಸೂರ ತಾಲೂಕು ಕೇಂದ್ರವಾಗಿದ್ದು, ಪಟ್ಟಣದ ಜನಸಂಖ್ಯೆ, ವ್ಯಾಪಾರ-ವಹಿವಾಟು ಹಾಗೂ ಆಡಳಿತಾತ್ಮಕ ಬೆಳವಣಿಗೆ ಪರಿಗಣಿಸಿ ಹುಲಸೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಸಚಿವ ಸಂಪುಟದ ಮೂಲಕ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ನಗರಾಡಳಿತ ಇಲಾಖೆಯ ವತಿಯಿಂದ ಹುಲಸೂರು ಗ್ರಾಮ ಪಂಚಾಯಿತಿ ಪ್ರದೇಶವನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸುವ ಸಂಬಂಧ ಅಧಿಸೂಚನೆ ಪ್ರಕ್ರಿಯೆ ನಡೆದಿರುವುದು ದಾಖಲೆಗಳಿಂದ ತಿಳಿದುಬರುತ್ತದೆ. ಆದರೆ, ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪ್ರಕಟಿಸಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಹುಲಸೂರನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಿರುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದು ಆಡಳಿತಾತ್ಮಕವಾಗಿ ಹಾಗೂ ಆರ್ಥಿಕವಾಗಿ ಅನಗತ್ಯ ಕ್ರಮವಾಗಲಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಡೆದ ನಂತರ ಕೆಲ ದಿನಗಳು ಅಥವಾ ತಿಂಗಳುಗಳಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆಸಬೇಕಾದ ಪರಿಸ್ಥಿತಿ ಎದುರಾದರೆ, ಸಾರ್ವಜನಿಕ ಹಣ, ಅಧಿಕಾರಿಗಳ ಸಮಯ ಹಾಗೂ ಆಡಳಿತಾತ್ಮಕ ಸಂಪನ್ಮೂಲಗಳ ವ್ಯರ್ಥವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹುಲಸೂರ ಗ್ರಾಮ ಪಂಚಾಯಿತಿಗೆ ಪ್ರಕಟಿಸಿರುವ ಮೀಸಲಾತಿ ಹಾಗೂ ಮುಂದಿನ ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕು. ರಾಜ್ಯ ಸರ್ಕಾರ ಘೋಷಿಸಿರುವ ಹುಲಸೂರ ಪಟ್ಟಣ ಪಂಚಾಯಿತಿ ರಚನೆಗೆ ಸಂಬಂಧಿಸಿದ ಎಲ್ಲ ಕಾನೂನು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹುಲಸೂರ ಪಟ್ಟಣ ಪಂಚಾಯಿತಿಯನ್ನು ಅಧಿಕೃತವಾಗಿ ರಚಿಸಿ, ಅಗತ್ಯವಿರುವ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಘೋಷಣೆಯನ್ನು ಗೌರವಿಸಿ ಹುಲಸೂರ ಕೇವಲ ಕಾಗದದ ಮೇಲಿನ ಪಟ್ಟಣ ಪಂಚಾಯಿತಿಯಾಗಿ ಉಳಿಸದೆ, ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪಟ್ಟಣ ಪಂಚಾಯಿತಿಯಾಗಿ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೀದರ್ | ನೂತನ ಜಿ.ಪಂ. ಸಿಇಒಗೆ ಸ್ವಾಗತ : ಸಿಇಒ ಗಿರೀಶ ಬದೋಲೆಗೆ ಆತ್ಮೀಯ ಬೀಳ್ಕೊಡುಗೆ
ಹುಲಸೂರಿನ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ನಗರ ಪ್ರದೇಶಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಪಟ್ಟಣ ಪಂಚಾಯಿತಿ ವ್ಯವಸ್ಥೆ ಅಗತ್ಯವಾಗಿದೆ. ಆದ್ದರಿಂದ ಹುಲಸೂರು ಗ್ರಾಮ ಪಂಚಾಯಿತಿ ಚುನಾವಣೆ ನಡೆಸದೆ, ಪಟ್ಟಣ ಪಂಚಾಯಿತಿ ರಚನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಹುಲಸೂರು ಪಟ್ಟಣ ಪಂಚಾಯಿತಿ ಚುನಾವಣೆಯನ್ನು ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪಟ್ಟಣದ ಪ್ರಮುಖರಾದ ಶಿವರಾಜ ಖಪಲೆ, ಸುಧೀರ್ ಕಾಡಾದಿ, ಪ್ರವೀಣ ಕಾಡಾದಿ, ಗುಲಾಂ ಬಡಾಯಿ,ಅರವಿಂದ ಹರಪಲ್ಲೆ, ಸಂದೀಪ ಬಿರಾದರ್, ಲವಿತ ಧರ್ಮನೆ, ಮಹಾದೇವ ಕವಟೆ, ಶ್ರೀಶೈಲ ಹಾರಕೂಡೆ, ಕಾಶಿನಾಥ ಕಲಾಲ, ಸಂತೋಷ ಗಾಯಕವಾಡ, ಇಜಾಜ್ ಜಹಾಂಗೀರ್, ಸಚಿನ್ ವಗ್ಗೆ, ಆಕಾಶ ಚೌರೆ, ಚಂದ್ರಶೇಖರ ಮಂಗಾ, ಭಾಗವತಾ ಜಾನಬಾ ಸೇರಿದಂತೆ ಅನೇಕರಿದ್ದರು.





