ಬಿಸಿಲಿನ ತಾಪ ಹೆಚ್ಚಳದಿಂದಾಗಿ ಜಿಲ್ಲೆಯ ಕಮಲನಗರ ಪಟ್ಟಣದ ಹೊರವಲಯದಲ್ಲಿ ಹೀಟ್ ಸ್ಟ್ರೋಕ್ನಿಂದಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಲಯಿಕ್ ಅಹ್ಮದ್ (20) ಎಂದು ಗುರುತಿಸಲಾಗಿದೆ. ಡಿಗ್ಗಿ ಗ್ರಾಮದ ಕಡೆಗೆ ರಾಷ್ಟ್ರೀಯ ಹೆದ್ದಾರಿ-50 ಮಾರ್ಗವಾಗಿ ತೆರಳುತ್ತಿದ್ದಾಗ ಯುವಕ ಏಕಾಏಕಿ ಕುಸಿದು ಬಿದ್ದಿದ್ದು, ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದರೂ, ಹೀಟ್ ಸ್ಟ್ರೋಕ್ನಿಂದಾಗಿ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ
ಆತ ಕಮಲನಗರದಲ್ಲಿ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿದ್ದು, ಹೊರಗಡೆ ಸಂಚರಿಸುವುದು ಕಷ್ಟವಾಗುವಷ್ಟು ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಘಟನೆಯ ದಿನ ಸಮೀರ್ ತಾಪಮಾನ ಹೆಚ್ಚಿದ ಪರಿಣಾಮ ತಲೆ ಸುತ್ತು ಕಾಣಿಸಿಕೊಂಡಿದೆ ಎಂದು ಹೇಳಿಕೊಂಡಿದ್ದ. ಸ್ಥಳೀಯ ಮೆಕ್ಯಾನಿಕ್ ಅಂಗಡಿ ಬಳಿ ನೀರು ಕುಡಿದು ಸ್ವಲ್ಪ ಸಮಯ ವಿಶ್ರಾಂತಿಯನ್ನೂ ಪಡೆದಿದ್ದ ಎನ್ನಲಾಗಿದೆ.
ಇದನ್ನೂ ಓದಿ : ಬೀದರ್ | ಬಿಸಿಲಿನ ಧಗೆಗೆ ತಂಪೆರದ ಜೋರು ಮಳೆ
ಮರಣೋತ್ತರ ಪರೀಕ್ಷೆಯ ವರದಿ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಕಮಲನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.





