ಮೈಸೂರು ನಗರದ ಎನ್.ಆರ್. ಮೊಹಲ್ಲಾದ ಮೆಸ್ಕೊ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜಾಗೃತ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯ ಸಂಚಾಲಕರಾದ ಡಾ. ಹೆಚ್.ವಿ. ವಾಸು ಮಾತನಾಡಿ, ‘ಯುವಜನತೆ ರಾಜಕೀಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊರೆದು ಸಕ್ರಿಯವಾಗಿ ಭಾಗವಹಿಸಬೇಕು’ ಎಂದು ಕರೆ ನೀಡಿದರು.
“ರಾಜಕೀಯದಲ್ಲಿ ಕೆಟ್ಟವರಿದ್ದಾರೆ ಎನ್ನುವುದು ಸತ್ಯವಾದರೂ, ಅದರಾಚೆಗೆ ಉತ್ತಮ ನಾಯಕರು ಸಹ ಇದ್ದಾರೆ. ದೇಶದಲ್ಲಿ ಬದಲಾವಣೆ ತರಬೇಕಾದರೆ ರಾಜಕೀಯದಲ್ಲಿ ಆಸಕ್ತಿ ಹೊಂದುವುದರ ಜೊತೆಗೆ ನೇರವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ. ರಾಜಕೀಯ ಅಧಿಕಾರದ ಮೂಲಕವೇ ಸಮಗ್ರ ಬದಲಾವಣೆ ಸಾಧ್ಯವಾಗುತ್ತದೆ” ಎಂದು ಹೇಳಿದರು.

“ಇತಿಹಾಸದ ಉದಾಹರಣೆ ನೀಡಿದ ಅವರು, ಒಂದು ಕಾಲದಲ್ಲಿ ಇಂದಿರಾಗಾಂಧಿ ಎದುರಾಳಿಗಳೇ ಇಲ್ಲವೆಂದು ಭಾವಿಸಿದ್ದರು. ಆದರೆ, ನಂತರ ನಡೆದ ಬೆಳವಣಿಗೆಗಳು ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸಿವೆ. ಅದೇ ರೀತಿ, ಇತ್ತೀಚಿನ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ‘400 ಪಾರ್’ ಗುರಿಯೊಂದಿಗೆ ಚುನಾವಣೆಗೆ ಹೋಗಿದ್ದರೂ, ಜನರು ಅದಕ್ಕೆ ಅವಕಾಶ ನೀಡದೆ 270 ಸ್ಥಾನಗಳ ದಾಟಲು ಕಷ್ಟಪಡುವ ಪರಿಸ್ಥಿತಿ ಉಂಟಾಯಿತು. ಇದು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ” ಎಂದು ವಿವರಿಸಿದರು.
“ಗ್ಯಾರೆಂಟಿ ಯೋಜನೆಗಳು ಉಚಿತ ಕೊಡುಗೆಗಳಲ್ಲ, ಅವು ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಉತ್ತೇಜನದ ಪ್ರಮುಖ ಸಾಧನಗಳಾಗಿವೆ. ಜನರು ಹಣ ಪಡೆದು ಮತಹಾಕುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಕೆಲವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳಬಹುದು, ಆದರೆ ಸಮೂಹವಾಗಿ ಹಣಕ್ಕಾಗಿ ಮತ ಹಾಕುತ್ತಾರೆ ಎಂಬುದು ಸರಿಯಲ್ಲ” ಎಂದು ಹೇಳಿದರು.

“ಮುಂದಿನ ಹತ್ತು ವರ್ಷಗಳಲ್ಲಿಯೂ ಯುವಜನತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳದೆ ಕೇವಲ ಟೀಕಿಸುತ್ತಾ ಮುಂದುವರಿದರೆ, ಬದಲಾವಣೆ ಆಗದಿದ್ದಕ್ಕೆ ಅವರೇ ಹೊಣೆಗಾರರಾಗುತ್ತಾರೆ. ದೇಶ ಮತ್ತು ಸಮಾಜದ ಅಭಿವೃದ್ಧಿಗಾಗಿ ಯುವಕರು ರಾಜಕೀಯಕ್ಕೆ ಬರಬೇಕು. ರಾಜಕಾರಣಿಯಾಗದಿದ್ದರೂ ರಾಜಕೀಯ ಸಂಘಟನೆಗಳಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಸಂಚಾಲಕ ಸುಹೆಲ್ ಅಹಮ್ಮದ್ ಮಾತನಾಡಿ, “ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಸಮರ್ಥ ನಾಯಕತ್ವ ಅಗತ್ಯ. ಅದಕ್ಕಾಗಿ, ರಾಜಕೀಯ ಅರಿವು ಮತ್ತು ತೊಡಗುವಿಕೆ ಮುಖ್ಯ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ದಲಿತ ಮಹಿಳೆಯೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವುದು ರಾಜಕೀಯದ ಮಹತ್ವವನ್ನು ಸಾರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಯುದ್ಧದ ಪರಿಣಾಮವಾಗಿ ಜಿಡಿಪಿ ಕುಸಿಯುವ ಸಾಧ್ಯತೆಯಿದೆ

“ರಾಜಕೀಯವೇ ಜನರ ದಿನನಿತ್ಯದ ಬದುಕನ್ನು ನಿರ್ಧರಿಸುವಾಗ ಅದರಿಂದ ದೂರ ಉಳಿಯುವುದು ಸರಿಯಲ್ಲ. ರಾಜಕೀಯ ತಪ್ಪು ಎನ್ನುವ ಭ್ರಮೆಯಿಂದ ಹೊರಬಂದು, ಬಾಬಾಸಾಹೇಬರ ಆಶಯದಂತೆ ನಾಯಕತ್ವದ ಹಾದಿ ಹಿಡಿಯಬೇಕು” ಎಂದು ಅಭಿಪ್ರಾಯಪಟ್ಟರು.
ಯುವಜನರಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರ ವಿವರ ಹೀಗಿದೆ:
ಪ್ರಬಂಧ ಸ್ಪರ್ಧೆ:
- ಪ್ರಥಮ ಬಹುಮಾನ – ಎಸ್. ವಿನೋದ್
- ದ್ವಿತೀಯ ಬಹುಮಾನ – ಎಸ್. ಶಿವರಂಜನಿ
- ತೃತೀಯ ಬಹುಮಾನ – ಆಫೀಫ ಸನ
ವಿಶೇಷ ಬಹುಮಾನಗಳು: ಕೆ.ಎನ್. ಶರತ್ ಕುಮಾರ್, ಎ. ಕುಮಾರಿ, ವಿ. ಪ್ರಕೃತಿ.
ಭಾಷಣ ಸ್ಪರ್ಧೆ:
- ಪ್ರಥಮ ಬಹುಮಾನ – ಮೂವಫಿಕಾ ಖಾನಂ
- ದ್ವಿತೀಯ ಬಹುಮಾನ – ಎ.ಜಿ. ಆಕಾಶ್
- ತೃತೀಯ ಬಹುಮಾನ – ಜುಹಾ ಆಫ್ಸಾನ್
ವಿಶೇಷ ಬಹುಮಾನಗಳು: ಫಾಲ್ಕೀಯ ಖಾನ್, ದಿವ್ಯ, ಜಿ.ಎಂ. ಯಶವಂತ್, ಪಿ.ಆರ್. ಅಪೂರ್ವ, ಎಂ. ಸಂತೋಷ್, ಕೆ.ಎನ್. ಅಂದಾನಿ.
ಕಾರ್ಯಕ್ರಮದಲ್ಲಿ ಪ್ರೊ. ಬಿ.ಎಂ. ಕೃಷ್ಣ, ಸಂತೋಷ್, ಅಸಾದುಲ್ಲಾ, ಪೂಜಾಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.





