ದೇಶದ ಜನರನ್ನು ಧರ್ಮದ ಹೆಸರಿನಲ್ಲಿ ಸಮೂಹಸನ್ನಿಗೆ ಬಳಸಿಕೊಂಡು ಭಾವನಾತ್ಮಕ ರಾಜಕಾರಣ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಆರ್‌ಎಸ್‌ಎಸ್ ಗುಟ್ಟು ನೀತಿಯನ್ನು ಕಮ್ಯೂನಿಸ್ಟ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.
ಬೀದರ್ ನಗರದ ಸಿಪಿಐ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಂಡಲದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ “ಜನಸಾಮಾನ್ಯರ ಅಸಂಖ್ಯಾತ ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ ಕೇವಲ ಧಾರ್ಮಿಕ ವಿಷಯಗಳಿಂದ ಭಾವನಾತ್ಮಕ ರಾಜಕಾರಣವನ್ನು ವಿರೋಧಿಸಿ ಜನರ ಬದುಕು ಕಟ್ಟುವ ರಾಜಕಾರಣ ಮುಂದುವರೆಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ನಮ್ಮ ಹೋರಾಟ ನಡೆಯುತ್ತಿದೆ” ಎಂದರು.
“ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಧಾನಿ ಮೋದಿ ನೇತ್ರತ್ವದ ಸರ್ಕಾರದ ನೀತಿ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದೆ. ಗಣರಾಜ್ಯ ದೇಶವನ್ನು ರಾಮರಾಜ್ಯ ಮಾಡಿದ್ದೇವೆ ಎಂದು ಹೇಳಿಕೊಂಡು, ರಾಮರಾಜ್ಯ ಬಂದ ಮೇಲೆ ದೇಶದಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತೇವೆ ಎನ್ನುವ ನಿಟ್ಟಿನಲ್ಲಿ ಭಾವನೆಗಳನ್ನು ಹೇರುವ ಕೇಂದ್ರದ ವಿರುದ್ಧ ನಾವು ಅನೇಕ ಕಾರ್ಯಕ್ರಮಗಳು ನಡೆಸುತ್ತಿದ್ದೇವೆ” ಎಂದರು.
ʼಇಂಡಿಯಾʼ ಮೈತ್ರಿಕೂಟಕ್ಕೆ ಸಿಪಿಐ ಬೆಂಬಲ :
“ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯಬೇಕೆಂಬ ಅಪೇಕ್ಷೆಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಜಾತ್ಯಾತೀತ, ಪ್ರಗತಿಪರ ಮತ್ತು ಎಡಪಕ್ಷಗಳು ಒಗ್ಗೂಡಿ ರಚಿಸಿದ ಇಂಡಿಯಾ ಮೈತ್ರಿಕೂಟದ ಭಾಗವಾಗಿ ನಾವಿದ್ದೇವೆ. ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ ನಾವು ಸಕ್ರಿಯವಾಗಿ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಮೌಲ್ಯಗಳಿಗೆ ಬೆಲೆ ಕೊಡುವ ಸರ್ಕಾರವನ್ನು ಕೇಂದ್ರದಲ್ಲಿ ರಚಿಸಲು ಸಂಪೂರ್ಣವಾಗಿ ರಾಜಕೀಯ ಹೋರಾಟಕ್ಕೆ ನಾವು ಮುಂದಾಗಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ನೋಟಿಸ್ ಬಂದ ಮೇಲೆ ಕಾರ್ಖಾನೆ ಬಂದ್ ಮಾಡಬೇಕು, ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲು: ಸಚಿವ ಈಶ್ವರ ಖಂಡ್ರೆ
“ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೇಸ್ ತೊರೆದು ಪುನಃ ಬಿಜೆಪಿ ಸೇರ್ಪಡೆಯಾಗಿದ್ದು ನೋಡಿದರೆ ಪ್ರಸಕ್ತ ರಾಜಕೀಯದಲ್ಲಿ ಯಾವುದೇ ರಾಜಕಾರಣಿಗಳಿಗೂ ಪಕ್ಷ ನಿಷ್ಠೆ ಮತ್ತು ಸಿದ್ಧಾಂತದ ವಿಚಾರಕ್ಕೆ ರಾಜಕಾರಣ ಮಾಡುವುದು ಮರೆಯಾಗಿದೆ. ರಾಜಕಾರಣವನ್ನು ಸಂಪೂರ್ಣವಾಗಿ ಕಲುಷಿತ ಮಾಡುತ್ತಿರುವ ರಾಜಕೀಯ ನಾಯಕರನ್ನು ಜನರೇ ಬಹಿಷ್ಕರಿಸಬೇಕು” ಎಂದು ಒತ್ತಾಯಿಸಿದರು.