ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು 24 ಗಂಟೆಯೊಳಗೆ ಪತ್ತೆಹಚ್ಚಿ ಬಂಧಿಸುವಲ್ಲಿ ಗೌರಿಬಿದನೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಕೇಂದ್ರ ವಲಯದ ಐಜಿಪಿ ಲಾಬುರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೌರಿಬಿದನೂರು ನಗರದ ನಿವಾಸಿ ತನ್ವೀರ್ ಖಾನ್ ಎಂಬಾತ ಹಿರೇಬಿದನೂರಿನ ಡೈರಿ ಬಳಿಯ ಮರದ ಕೆಳಗೆ ಏ.24ರಂದು ತನ್ನ ಪ್ಯಾಷನ್ ಪ್ರೊ ಬೈಕ್ ನಿಲ್ಲಿಸಿದ್ದು, ಇದ್ದಕ್ಕಿದ್ದಂತೆ ಬೈಕ್ ಕಳ್ಳತನವಾಗಿತ್ತು. ಈ ಕುರಿತು ತನ್ವೀರ್ ಖಾನ್ ಗೌರಿಬಿದನೂರು ನಗರ ಠಾಣೆಯಲ್ಲಿ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಅಪರಾಧ ತಂಡ ಹಿಂದೂಪುರ, ಬೆಂಗಳೂರಿಗೆ ಹೋಗಿ ಆರೋಪಿಯ ಸುಳಿವನ್ನು ಪತ್ತೆಹಚ್ಚಿದ್ದರು. ಗೌರಿಬಿದನೂರು ನಗರದ ಮುದಗಾನಕುಂಟೆ ಕ್ರಾಸ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಯನ್ನು ಹಿಡಿದು ವಿಚಾರನೆಗೊಳಪಡಿಸಿದ್ದು, ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಗೌರಿಬಿದನೂರು ನಗರದ ನದಿಗಡ್ಡೆ ನಿವಾಸಿ ಪ್ರಭು ಬಿನ್ ನರಸಿಂಹಮೂರ್ತಿ(24) ಕಳ್ಳತನದ ಆರೋಪಿ. ಆರೋಪಿಯಿಂದ ಸುಮಾರು 1.15 ಲಕ್ಷ ಮೌಲ್ಯದ ಒಟ್ಟು ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಗೌರಿಬಿದನೂರು ನಗರ ಎಸ್‌ಐ ಚಂದ್ರಕಲಾ, ಸಿಬ್ಬಂದಿಗಳಾದ ಶ್ರೀರಾಮಯ್ಯ, ಪುಷ್ಪ, ಶಿವಶೇಖರ್, ಮಹಂತೇಶ್, ಸಂತೋಷ್ ಮಾಳಗಿ, ತಾಂತ್ರಿಕ ಸಿಬ್ಬಂದಿಯವರಾದ ರವಿಕುಮಾರ್, ಮುನಿಕೃಷ್ಣ ಅವರನ್ನು ಎಸ್ಪಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.