ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗ ಕಾಂಗ್ರೆಸ್ ಸರ್ಕಾರದ ನೂತನ ಉಪಮುಖ್ಯಮಂತ್ರಿ. ಹೊಸ ಕಾಲಮಾನದ ರಾಜಕೀಯ ಘಟ್ಟದಲ್ಲಿ ಕಾಂಗ್ರೆಸ್‌ಗೆ ಹೊಸ ಎತ್ತರವನ್ನು ಕಲ್ಪಿಸಿಕೊಟ್ಟವರು ಡಿಕೆ ಶಿವಕುಮಾರ್. ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಬಳಿಕ ಪಕ್ಷವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದ ನಾಯಕ ಡಿಕೆ ಶಿವಕುಮಾರ್.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹುಟ್ಟಿದ್ದು, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ. ಇವರ ತಂದೆ ಕೆಂಪೇಗೌಡ ಮತ್ತು ತಾಯಿ ಗೌರಮ್ಮ. 1962ರ ಮೇ 15ರಂದು ಜನಿಸಿದರು. 18ನೇ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್ಎಸ್‌ಯುಐಗೆ ಸೇರ್ಪಡೆಯಾಗುವ ಮೂಲಕ ಪಕ್ಷ ರಾಜಕಾರಣದ ವ್ಯಾಪ್ತಿಗೆ ಬಂದರು.
ವಿದ್ಯಾಭ್ಯಾಸ
ಡಿಕೆ ಶಿವಕುಮಾರ್ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದರು. ಆರ್ ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‌ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಮುಕ್ತ ವಿಶ್ವವಿದಾಲಯದಲ್ಲಿ ರಾಜಕೀಯ ಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ರಾಜಕೀಯ
1981ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಧುಮುಕಿದ ಶಿವಕುಮಾರ್, 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಹಿರಿಯ ನಾಯಕ ಎಚ್.ಡಿ ದೇವೇಗೌಡರ ವಿರುದ್ಧ ಸ್ಪರ್ಧಿಸಿ, ಸೋತರು. 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಮೂಲಕ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಶಾಸಕರಾದರು.

1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿ ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾದರು. ಇದರಲ್ಲಿ ಶಿವಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆ ಬಂಗಾರಪ್ಪ ಶಿವಕುಮಾರ್‌ಗೆ ಬಂದೀಖಾನೆ ಸಚಿವ ಸ್ಥಾನ ನೀಡಿದರು.
1994ರಲ್ಲಿ ಪಕ್ಷ ಟಿಕೆಟ್ ನೀಡಲಿಲ್ಲ. ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಯಗಳಿಸಿದರು. ಎಸ್ ಎಂ ಕೃಷ್ಣ ಅವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕೆಲಸ ಮಾಡಿದರು. ಸಹಕಾರ ಸಚಿವರಾಗಿ, ನಗರಾಭಿವೃದ್ಧಿ ಖಾತೆ ಮತ್ತು ರಾಜ್ಯ ನಗರಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. (1999-2002).
2004ರಲ್ಲಿ ಡಿ ಕೆ ಶಿವಕುಮಾರ್ ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಭಾರಿ ಆರಿಸಿ ಬಂದರು. ಈ ವೇಳೆ ಪಕ್ಷ ಕಾಂಗ್ರೆಸ್ ಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾಯಿತು. 2008ರಲ್ಲಿ ಮತ್ತೆ ಶಾಸಕರಾದರು. ಈ ವೇಳೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು.
2013ರಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂತು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರು. ಇಂಧನ ಸಚಿವರಾಗಿ ಡಿಕೆಶಿ ಕೆಲಸ ಮಾಡಿದರು.
ಈ ಸುದ್ದಿ ಓದಿದ್ದೀರಾ? ಪಕ್ಷಕ್ಕಾಗಿ ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡೆ : ಡಿ ಕೆ ಶಿವಕುಮಾರ್
2018ರಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯಲಿಲ್ಲ. ಈ ವೇಳೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತು. ಜೆಡಿಎಸ್‌ನ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಈ ವೇಳೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾದರು. ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತು.
2023ರಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರ ಗದ್ದುಗೆ ಹಿಡಿದಿದೆ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದು, ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗುತ್ತಿದ್ದಾರೆ.