ಬಿಜೆಪಿಯವರು ಕಲಬುರಗಿಗೆ ಎರಡು ವೈರಸ್ ಬಿಟ್ಟಿದ್ದಾರೆ. ಒಂದು ವೈರಸ್ ಮಣಿಕಂಠ ರಾಠೋಡ, ಎರಡನೇ ವೈರಸ್ ಛಲವಾದಿ ನಾರಾಯಣಸ್ವಾಮಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್.ರವಿಕುಮಾರ್ ಹೇಳಿಕೆ ಖಂಡಿಸಿ ನಾಗರಿಕ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿದರು.
ಕಲಬುರಗಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ನಾಗರಿಕರು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತ ತೆರಳಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತ್ತು.
ಎನ್.ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ಅಣಕು ಶವಯಾತ್ರೆ ಮೆರವಣಿಗೆ ಗಮನ ಸೆಳೆಯಿತು, ಬಳಿಕ ಪ್ರತಿಕೃತಿ ದಹಿಸಿದರು.

‘ಬಿಜೆಪಿಯವರು ಕಲಬುರಗಿಯನ್ನು ಎರಡನೇ ಮಂಗಳೂರು ಮಾಡಬೇಕೆಂದು ಯೋಜನಾಬದ್ಧವಾಗಿ ಕಲಬುರಗಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಿಂದೂ-ಮುಸ್ಲಿಂ ಮಧ್ಯೆ ಕೋಮು ಸೃಷ್ಟಿಸುವುದು, ಇನ್ನೊಂದು ಕಾಂಗ್ರೆಸ್ ಪಕ್ಷದ ಶಕ್ತಿ ಕೇಂದ್ರವಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸುವುದು ಅವರ ಉದ್ದೇಶವಾಗಿದೆ’ ಎಂದು ಕಿಡಿಕಾರಿದರು.
‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಅದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯ ಕಾರಣ. ಹೀಗಾಗಿ ಕಲಬುರಗಿಯಲ್ಲಿ ದಲಿತರ ಶಕ್ತಿ ಮಣಿಸುವ ಉದ್ದೇಶದಿಂದ ದಲಿತರ ವಿರುದ್ಧ ದಲಿತರನ್ನು ಎತ್ತಿ ಕಟ್ಟುವ ಬಿಜೆಪಿಯ ರಾಜಕಾರಣಕ್ಕೆ ನಾವು ದಿಕ್ಕರಿಸಬೇಕು. ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಹೇಯವಾಗಿ ಮಾತನಾಡಿರುವ ಎನ್.ರವಿಕುಮಾರ್ ಅವರ ಮಾನಸಿಕತೆ ಅತ್ಯಂತ ಹೊಲಸು. ಅವರ ನಾಲಿಗೆ ಇನ್ನಾದರೂ ಶುದ್ಧಶಾಗಲಿ ಎಂದು ಹೇಳಿದರು.
ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಮಾತನಾಡಿ, ‘ಬಿಜೆಪಿ ಪಕ್ಷದವರಿಗೆ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಸಮುದಾಯದವರ ಬೆಳವಣಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಕಲಬುರಗಿ ಡಿಸಿ ವಿರುದ್ಧ ಸೇರಿದಂತೆ ಮಹಿಳೆಯರ ಬಗ್ಗೆ ಬಿಜೆಪಿಗರು ಅವಹೇಳನಾಕಾರಿಯಾಗಿ ಮಾತನಾಡುವುದು ನಿಲ್ಲಿಸಬೇಕು’ ಎಂದರು.
ದಲಿತ ಮುಖಂಡ ಡಿ.ಜಿ.ಸಾಗರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಛಲವಾದಿ ನಾರಾಯಣಸ್ವಾಮಿ ಮಲ್ಲಿಕಾರ್ಜುನ ಖರ್ಗೆ ಅವರ ಗರಡಿಯಲ್ಲಿ ಪಳಗಿದವರು. ಈಗ ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಮನುವಾದಿ ನಾರಾಯಣಸ್ವಾಮಿ ಆಗಿ ಬದಲಾಗಿದ್ದಾರೆ’ ಎಂದರು.

ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ‘ಎನ್.ರವಿಕುಮಾರ್ ಬಳಸಿದ ಭಾಷೆ ಖಂಡನೀಯ, ಅವರಿಗೆ ಮದ ಏರಿದೆ. ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಸರಕಾರ ಪಣತೊಟ್ಟರೆ, ಈ ಬಿಜೆಪಿಗರಿಗೆ ಶಾಂತಿ, ಸಹಬಾಳ್ವೆಯಲ್ಲಿ ನಂಬಿಕೆ ಇಲ್ಲ, ಅನಾವಶ್ಯಕವಾಗಿ ಕೀಳು ಮಟ್ಟದ ಹೇಳಿಕೆ ನೀಡುತ್ತಾರೆ. ಈ ಇದೇ ರೀತಿಯ ಭಾಷೆ ಮುಂದುವರೆಸಿದರೆ ಕಲಬುರಗಿಗೆ ಕಾಲಿಡಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.
ಶಾಸಕರಾದ ಎಂ.ವೈ.ಪಾಟೀಲ್, ಎಂಎಲ್ಸಿ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರು, ಶಾಸಕ ಅಲ್ಲಮಪ್ರಭು ಪಾಟೀಲ, ದಸಂಸ ಮುಖಂಡ ಮಾವಳ್ಳಿ ಶಂಕರ ಸೇರಿದಂತೆ ಅನೇಕರು ಮಾತನಾಡಿದರು.
ಸಂದರ್ಭದಲ್ಲಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಮುಖಂಡರಾದ ರಾಜು ಕಪನೂರ್, ಕೆಬಿ ಶಾಣಪ್ಪ, ಲಚ್ಚಪ್ಪಾ ಜಮಾದಾರ್, ಸಂತೋಷ್ ರಾಥೋಡ್, ಮಜಹರ್ ಖಾನ್ ಆಲಂ, ಭೀಮಣ್ಣ ಸಾಲಿ, ಪವನಕುಮಾರ್ ವಳಕೇರಿ, ಅಶ್ವಿನ್ ಸಂಕಾ, ದಿಗಂಬರ ಬೆಳಮಗಿ, ವಿಠ್ಠಲ್ ದೊಡ್ಡಮನಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.