ರಾಜ್ಯದಲ್ಲಿ ಬಿಜೆಪಿಯಿಲ್ಲ. ವಿಧಾನಸಭೆ ಚುನಾವಣೆವರೆಗೆ ಬಿಎಲ್‌ಪಿ (ಬಿಎಲ್ ಸಂತೋಷ್ ಪಾರ್ಟಿ) ಇತ್ತು. ಈಗ ಬಿಎಸ್‌ಪಿ (ಬಿಎಸ್ ಯಡಿಯೂರಪ್ಪ ಪಾರ್ಟಿ) ಇದೆ. ಯಾರು ಅವರ ಹಿಂದೆ ನೇತಾಡುತ್ತಾರೆ, ಬಕೆಟ್ ಹಿಡಿಯುತ್ತಾರೆ, ಜೈ ಅನ್ನುತ್ತಾರೆ, ಅವರಿಗೆ ಮಾತ್ರ ಅವಕಾಶವಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮಾಜಿ ನಾಯಕ, ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಟೀಕಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಅವರಿಗೆ ಟಿಕೆಟ್ ಕೊಡದಿರುವ ಬಗ್ಗೆ ಮಾತನಾಡಿದರು.
“ನಾನು ಹುಟ್ಟಿದ ಜಾತಿ, ಊರು ಸರಿಯಲ್ಲ. ನಾನು ಬ್ರಾಹ್ಮಣ, ಒಕ್ಕಲಿಗ, ಬಂಟ, ಲಿಂಗಾಯತನಾಗಿ ಹುಟ್ಟಿದ್ದರೆ ಅವಕಾಶ ಸಿಗುತ್ತಿತ್ತು. ಶೂದ್ರ ಸಮಾಜದಲ್ಲಿ ಹುಟ್ಟಿದ್ದರಿಂದ ಸೇವೆ ಮಾಡಲು ಮಾತ್ರ ನನಗೆ ಅವಕಾಶವಿದೆ. ಆದ್ದರಿಂದ ಶೂದ್ರರು ತಾವಾಗಿಯೇ ಸ್ಥಾನ ಕೇಳಲು ಹೋಗಬಾರದು. ಇಲ್ಲಿ ನಾಯಕರು ಹೇಳಿದಂತೆ, ಬಾಲ ಮುದುರಿಕೊಂಡು ಬಕೆಟ್ ಹಿಡಿಯುವವರಿಗೆ, ಗುಲಾಮರಿಗೆ ಮಾತ್ರ ಬೆಲೆ. ಸ್ವಂತ ಶಕ್ತಿ ಇರುವವರಿಗೆ ಬೆಲೆಯಿಲ್ಲ” ಎಂದರು.
ಕೋಟ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಬಿಲ್ಲವ ಸಮಾಜಕ್ಕೆ ಅನ್ಯಾಯ ಮಾಡಿದೆ. ಕೋಟ ಅವರು ಎಂಎಲ್‌ಸಿ ಹಾಗೂ ವಿಧಾನಪರಿಷತ್‌ನ ವಿಪಕ್ಷ ನಾಯಕನ ಹುದ್ದೆಯಲ್ಲಿದ್ದವರು. ಇಂತಹ ಹುದ್ದೆ ಈ ಸಮಾಜಕ್ಕೆ ಮತ್ತೆ ದೊರಕಲು ಸಾಧ್ಯವಿಲ್ಲ. ಸಮಾಜದ ಬೇರೆಯವರಿಗೆ ಬಿಜೆಪಿ ಈ ಟಿಕೆಟ್ ಕೊಟ್ಟಿದ್ದರೆ ಅದಕ್ಕೊಂದು ಬೆಲೆಯಿತ್ತು. ಕೋಟ ಅವರಿಗೆ ಟಿಕೆಟ್ ಕೊಟ್ಟಿರುವುದು ಬಿಲ್ಲವ ಸಮಾಜಕ್ಕೆ ಲಾಭಕ್ಕಿಂತ ಹೆಚ್ಚು ಅನ್ಯಾಯವಾಗಿದೆ” ಎಂದರು.
“ಅನೇಕ ವರ್ಷಗಳ ಬಳಿಕ ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಮೂವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ನೀಡಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪದ್ಮರಾಜ್, ಉಡುಪಿಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಿವಮೊಗ್ಗದಲ್ಲಿ ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಶ್ರೀ ನಾರಾಯಣಗುರು ವಿಚಾರ ವೇದಿಕೆ ಮಾಡಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಿ : ಡಿಸಿ ಗೋವಿಂದರೆಡ್ಡಿ
“ಈ ಮೂವರು ಗೆದ್ದಲ್ಲಿ ಸಮಾಜಕ್ಕೊಂದು ಬಲ ಬರಲಿದೆ. ಆದ್ದರಿಂದ ಬಿಲ್ಲವ, ಈಡಿಗ ಸಮಾಜದ ಬಾಂಧವರು ಪಕ್ಷಗಳನ್ನು ಬದಿಗೊತ್ತಿ ಈ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕು” ಎಂದು ಸತ್ಯಜಿತ್ ಸುರತ್ಕಲ್ ಕರೆ ನೀಡಿದರು.