- ಕೊಬ್ಬರಿಗೆ ಮೊದಲು ಕೇಂದ್ರದಿಂದ ಬೆಂಬಲ ಬೆಲೆ ಕೊಡಿಸಿ: ಆಗ್ರಹ
- ಬಿಜೆಪಿ ಸದಸ್ಯರಿಗೆ ರೈತರ ಬಗ್ಗೆ ಕಿಂಚತ್ತಾದರೂ ಕಾಳಜಿ ಇದೆಯಾ
ಕೊಬ್ಬರಿಗೆ ಬೆಂಬಲ ಬೆಲೆ ಸಿಗದೇ ರೈತರು ಸಾಯುತ್ತಿದ್ದಾರೆ. ಸದನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿದ್ದಾರೆ. ಬೆಂಬಲ ಬೆಲೆ ಬಗ್ಗೆ ಮಾತನಾಡದೇ ಇರುವ ಬಿಜೆಪಿ ಸದಸ್ಯರಿಗೆ ನಾಚಿಕೆಯಾಗಬೇಕು. ನಿಮಗೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯಾ ಎಂದು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ಪ್ರತಿಪಕ್ಷದ ಸದಸ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸದನ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಅವಧಿಗೆ ಬಿಜೆಪಿ ಸದಸ್ಯರು ಅಡ್ಡಿಯಾದ ಹಿನ್ನೆಲೆಯಲ್ಲಿ ಸದನವನ್ನು ಸಭಾಧ್ಯಕ್ಷರು 15 ನಿಮಿಷಗಳ ಮುಂದೂಡಿದ್ದರು. ನಂತರ ಸದನ ಆರಂಭವಾದರೂ ಬಿಜೆಪಿ ಸದಸ್ಯರು ಮಾತ್ರ ಸದನದ ಬಾವಿಯಿಂದ ತೆರಳದೇ ಪ್ರತಿಭಟನೆ ಮುಂದುವರಿಸಿದರು. ಬಿಜೆಪಿ ಪ್ರತಿಭಟನೆ ನಡುವೆಯೇ ಪ್ರಶ್ನೋತ್ತರ ಅವಧಿ ಮುಗಿಸಿದ ಸಭಾಧ್ಯಕ್ಷ ಯು ಟಿ ಖಾದರ್ ಶೂನ್ಯ ವೇಳೆ ಕೈಗೆತ್ತಿಕೊಂಡು ಶಾಸಕ ಕೆ ಎಂ ಶಿವಲಿಂಗೇಗೌಡ ಅವರಿಗೆ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಟ್ಟರು.
ಬಿಜೆಪಿ ಸದಸ್ಯರ ನಡವಳಿಕೆಗೆ ಗರಂ ಆದ ಶಿವಲಿಂಗೇಗೌಡ, “ಎಂಎಸ್‌ಪಿಗೆ ದರ ಕೊಟ್ಟಿದ್ದೀರಾ? ನಾಚಿಕೆ ಆಗಬೇಕು ನಿಮಗೆ. ಕೊಬ್ಬರಿ ಬೆಲೆ 6,800 ರೂ. ಆಗಿದೆ. ಜನ ಸುಮ್ಮನೇ ಇದ್ದಾರೆ ಎಂದರೆ ಅವರು ದಡ್ಡರಲ್ಲ. ಮೊದಲು ಬೆಂಬಲ ಬೆಲೆ ಬಗ್ಗೆ ಮಾತನಾಡಿ. ಇಲ್ಲಿ ಪ್ರತಿಭಟಿಸುವುದು ಸರಿಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಅಧಿವೇಶನ 2023 | ಪ್ರಶ್ನೋತ್ತರ ಕಲಾಪಕ್ಕೆ ಬಿಜೆಪಿ ಸದಸ್ಯರಿಂದ ಅಡ್ಡಿ, 15 ನಿಮಿಷ ಸದನ ಮುಂದೂಡಿಕೆ
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಧ್ಯ ಪ್ರವೇಶಿಸಿ, “ಆಡಳಿತ ಪಕ್ಷದ ಸದಸ್ಯರಿಗೆ ಏಕಾಏಕಿ ಕೊಬ್ಬರಿ ಮೇಲೆ ಪ್ರೀತಿ ಬಂದಿದೆ. ಸರ್ಕಾರ ರಚಿಸಿದ ಮರುದಿನವೇ ಬೆಂಬಲ ಬೆಲೆ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದು ಮರೆತಿದ್ದಾರೆ. ನಾನು ಈ ಬಗ್ಗೆ ನಿಲುವಳಿ ಸೂಚನೆ ಕೊಟ್ಟಿದ್ದೇನೆ. ಮೊದಲು ಆ ಬಗ್ಗೆ ಚರ್ಚೆಯಾಗಲಿ” ಎಂದು ತಿಳಿಸಿದರು.
ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷದ ನಾಯಕರ ಮಧ್ಯೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಕುಮಾರಸ್ವಾಮಿ ತಮ್ಮ ಪಕ್ಷದ ಸದಸ್ಯರನ್ನು ಸದನದ ಬಾವಿಗೆ ಕರೆತಂದು, ಬಿಜೆಪಿ ಜೊತೆ ಪ್ರತಿಭಟನೆ ಮುಂದುವರಿಸಿದರು. ಸಭಾಧ್ಯಕ್ಷರು ಪ್ರತಿಪಕ್ಷಗಳ ವರ್ತನೆಗೆ ಬೇಸರಿಸಿ, ಸದನವನ್ನು 3 ಗಂಟೆಗೆ ಮುಂದೂಡಿದರು.