ಕರ್ನಾಟಕ ರತ್ನ ಡಾ ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನದ ಅಂಗವಾಗಿ ಕೊಡಗು ಜಿಲ್ಲೆ, ಸೋಮವಾರ ಪೇಟೆ ಮಹಿಳಾ ಸಮಾಜದಲ್ಲಿ ತಥಾಸ್ತು ಸಾತ್ವಿಕ ಸಂಸ್ಥೆ, ಅಬಕಾರಿ ಇಲಾಖೆ ಹಾಗೂ ಬಿಟಿಸಿಜಿ ಕಾಲೇಜು ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ತಹಶೀಲ್ದಾರ್ ಕೃಷ್ಣಮೂರ್ತಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ” ರಕ್ತದಾನ ಬಹಳ ಶ್ರೇಷ್ಠವಾದ ದಾನವಾಗಿದೆ, ರಕ್ತ ನೀಡುವ ಮೂಲಕ ಮತ್ತೊಂದು ಜೀವವನ್ನು ಉಳಿಸುವ ಮಹತ್ತರವಾದ ಕಾರ್ಯವಾಗಿದೆ. ಈ ಹಿಂದೆ ಅಪಘಾತ ಅಥವಾ ಶಸ್ತ್ರ ಚಿಕಿತ್ಸೆಯ ಸಂದರ್ಭ ರಕ್ತಕ್ಕಾಗಿ ಪರದಾಡಬೇಕಾಗಿತ್ತು. ಆದರೆ, ಇಂದು ಎಲ್ಲೆಡೆ ಬ್ಲಡ್ ಬ್ಯಾಂಕ್ ಇರುವುದರಿಂದ ಸಕಾಲದಲ್ಲಿ ಸಿಗುತ್ತದೆ. ಆದರೂ, ಕೆಲವೊಮ್ಮೆ ವಿಶೇಷ ಗ್ರೂಪಿನ ರಕ್ತ ಸಿಗದೇ ಪರದಾಡುವಂತಹ ಸ್ಥಿತಿ ಇದೆ. ಶಿವಕುಮಾರ ಸ್ವಾಮೀಜಿಗಳ ಸ್ಮರಣಾರ್ಥ ರಕ್ತದಾನ ಶಿಬಿರ ಮಾಡುತಿರುವುದು ಅಭಿನಂದನಾರ್ಹ “ಕಾರ್ಯವೆಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ ” ನೂರಾಹನ್ನೊಂದು ವರ್ಷಗಳ ಸಾರ್ಥಕ ಬದುಕು ಸವೆಸಿದ ಕಾಯಕಯೋಗಿ,ನಡೆದಾಡುವ ದೇವರು,ಕರ್ನಾಟಕ ರತ್ನ , ಡಾ ಶಿವಕುಮಾರ ಸ್ವಾಮೀಜಿ ಜಯಂತಿಯ ಸ್ಮರಣಾರ್ಥ ನಾಡಿನಾದ್ಯಂತ ರಕ್ತ ದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಸೇವೆಗಳು, ಕಾರ್ಯಗಳು ನಡೆಯುತ್ತಿವೆ. ಮಹನಿಯರುಗಳ ಹೆಸರಿನಲ್ಲಿ ನಡೆಯುವ ಇಂತಹ ಶಿಬಿರಗಳು ಅವರ ಹೆಸರನ್ನು ಸಾರ್ಥಕಗೊಳಿಸುತ್ತದೆ. ಶಿವಕುಮಾರ ಸ್ವಾಮೀಜಿ ಮಕ್ಕಳಲ್ಲಿ ದೇವರನ್ನು ಕಂಡವರು.ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಇಂದಿಗೂ ಮಠದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅದಿಕ ಮಕ್ಕಳು ತ್ರಿವಿಧ ದಾಸೋಹ, ಆಶ್ರಯ ಪಡೆದಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ನಡೆಸುವ ಮೂಲಕ ಸ್ಮರಣೆಗೆ ಅವಕಾಶ ಕಲ್ಪಿಸಿದ ತಥಾಸ್ತು ಸಂಸ್ಥೆ ಹಾಗೂ ಅಬಕಾರಿ ಇಲಾಖೆಯ ಕಾರ್ಯ ” ಶ್ಲಾಘನೀಯವೆಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ದಲಿತ ಸಮುದಾಯದ ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ; ತಹಶೀಲ್ದಾರ್ ನಡೆಗೆ ಖಂಡನೆ
ತಪೋ ಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ,ಪಟ್ಟಣದ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಅಬಕಾರಿ ಇಲಾಖೆ ನಿರೀಕ್ಷಕ ಲೋಕೇಶ್,ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ್ ಮಾಲ್,ಮಡಿಕೇರಿ ರಕ್ತನಿಧಿ ಘಟಕದ ವೈದ್ಯ ಡಾ ಕರುಬಯ್ಯ, ಬಿಟಿಸಿಜಿ ಕಾಲೇಜು ಪ್ರಾಂಶುಪಾಲ ಹರ್ಷ, ಪತ್ರಕರ್ತ ಎಸ್ ಮಹೇಶ್, ಶಿವಕುಮಾರ್ ಸೇರಿದಂತೆ ಇನ್ನಿತರರು ಇದ್ದರು.