ಜಾತಿ-ತಾರತಮ್ಯ ಈ ಸಮಾಜದ ಕಾಯಿಲೆ ಇದು ನೆನ್ನೆ ಮೊನ್ನೆಯದಲ್ಲ ಬದಲಾಗಿ ಬಹಳ ಹಿಂದಿನಿಂದಲೂ ಬಂದಿರುವ ಕ್ರೌರ್ಯ. ಈ ಹೊತ್ತಿನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಬದಲಾಗಿರುವ ಹಾಗೆ ಕಂಡರೂ ದಲಿತರ ಶೋಷಣೆ ಮುಂಚಿನಷ್ಟೇನೂ ಇಲ್ಲ ಎನ್ನುವುದು ಎಷ್ಟು ಗಮನಾರ್ಹ ಸಂಗತಿಯೋ ಮತ್ತದು ವರ್ತಮಾನದ ಆಧುನಿಕ ಯುಗದಲ್ಲಿ ಹೊಸ ಹೊಸ ಆಯಾಮಗಳನ್ನು ಪಡೆದುಕೊಂಡಿದೆ ಎಂಬುದು ಕೂಡ ಅಷ್ಟೇ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿ. ಆ ನಿಟ್ಟಿನಲ್ಲಿ ಶಿವಣ್ಣ ತಿಮ್ಮಲಾಪುರ ರವರು ಇವತ್ತಿನ ಸಾಮಾಜಿಕ ರಾಜಕೀಯ ತಲ್ಲಣಗಳ ಮಧ್ಯೆ ತಮ್ಮ ಪೂರ್ವಜರ ಗಾಢವಾದ ಸಂವೇದನೆಗಳ ಚಹರೆಯನ್ನು ಮೆಲುಕು ಹಾಕುತ್ತಾ, ಅವನ್ನು ತಮ್ಮೊಳಗಿನ ಇಂದಿನ ಸವಾಲುಗಳೊಂದಿಗೆ ಸಮೀಕರಿಸಿ ಬರೆದ ಈ ಕವಿತೆಗಳು ಆಧುನಿಕ ದಲಿತ ಹೋರಾಟಕ್ಕೆ ಒಂದು ರೀತಿಯ ಫ್ಲ್ಯಾಶ್ ಬ್ಯಾಕ್ ನಂತಿವೆ.
“ತೊಗಲ-ಯೋಗಿ” ಎಂಬ ಶೀರ್ಷಿಕೆಯೇ ಓದುಗರನ್ನು ಸೆಳೆಯುತ್ತದೆ. ಉಳುವ ಕಾಯಕವ ಧ್ಯಾನವೆಂದು ಪರಿಗಣಿಸಿದ ರಸ ಋಷಿ ರೈತನನ್ನು ʼನೇಗಿಲ ಯೋಗಿʼ ಎಂದರು. ಅದರಂತೆ ಚಮ್ಮಾರನ ಕಾಯಕವೂ ಸಹ ಧ್ಯಾನಸ್ಥ ರೀತಿಯದ್ದೆ ಎಂದು ಹೇಳುವ ಕವಿ ಆತನಿಗೆ ತೊಗಲಯೋಗಿ ಎಂಬ ಪುರಸ್ಕಾರ ನೀಡಿ, ಆ ಕಾಯಕದ ಘನತೆಯನ್ನು ಹೆಚ್ಚಿಸಿದ್ದಾರೆ. ಮತ್ತಿದು ಇಲ್ಲಿನ ಬಹಳಷ್ಟು ಕವಿತೆಗಳಲ್ಲಿ ನಿರೂಪಿತವಾಗಿದೆ ಕೂಡ.
ಮೂವತ್ತೖದು ಕವಿತೆಗಳಿರುವ ಈ ಸಂಕಲನದ ಭಾಷೆ, ವಿಷಯ ವಸ್ತು, ಮತ್ತದನ್ನು ಕಟ್ಟಿಕೊಡುವ ಬಗೆ ಚೆನ್ನಾಗಿದ್ದು ಕೆಲವು ಕವಿತೆಗಳಂತೂ ಎದೆಗಿಳಿಯುತ್ತವೆ. ಹಾಗೆ ನೋಡುವುದಾದರೆ, ಮೊದಲ ಕವಿತೆಯಲ್ಲಿ ಬರುವ “ಹಳಸಿದ ಅನ್ನ ನೀಡಿದವರ ಮಕ್ಕಳಿಗೆ ಪ್ರತಿಯಾಗಿ ನೀಡುತ್ತಿದ್ದೇವೆ ಇಂದು ಅನ್ನ ಅರಿವೇ ಅಕ್ಷರ”ಈ ಸಾಲುಗಳಿಗೆ ಎಷ್ಟು ಅರ್ಥಗಳಿವೆ… ಇಡೀ ಕವಿತೆಯಲ್ಲಿ ಈ ಸಾಲುಗಳು ಹೆಚ್ಚು ಧನಿಸುತ್ತವೆ. ಮುಂದುವರೆದು, “ಪರವಶನಾಗಿ ಅಣ್ಣತಲೆಯ ಮೇಲೆ ಹೊತ್ತು ದೇವರ ಪಾದಕೆಗಳಿವು ಶರಣು ಶರಣಾರ್ಥಿ ಎಂದಿತು ಚರಿತ್ರೆ..! ಈ ಸಾಲುಗಳು ತೊಗಲಯೋಗಿ ಎಂಬ ನಾಮಾಂಕಿತಕ್ಕೆ ಹೇಳಿ ಬರೆಸಿದಂತಿವೆ.
ಜಾಡಮಾಲಿ ಕವಿತೆಯಲ್ಲಿ ದಲಿತರ ಕಾಯಕದ ಮಹತ್ವವೇನು ಎಂಬುದನ್ನು ಕಟ್ಟಿಕೊಡುವ ಕವಿ ಕೊನೆಯಲ್ಲಿ,”ನಿನ್ನ ಕಾಯಕಕ್ಕೆ ಎಣೆಯುಂಟೆ?, ಕುಲದ ಕುಲುಮೆಯಲಿ, ಕುದಿವ ಈ ಜಗದಿ” ಎಂಬ ಸಾಲುಗಳು ನಮ್ಮಲ್ಲಿ ಇದ್ದ ವರ್ಣವ್ಯವಸ್ಥೆಯ ತೀವ್ರತೆಯನ್ನು ಧ್ವನಿಸುತ್ತವೆ.

“ಬೆಳಕು ಬೇಕು ಶಾಂತಿ ಬೇಡ, ಖಾದಿ ಬೇಕು ತತ್ವ ಬೇಡ,ಬಾಬಾ ಸಾಹೇಬ ಬೇಕು, ಸಮಾನತೆ ಬೇಡ”ಸಮಾನತೆ ಹೆಸರಿನಲ್ಲಿ ಮುಖವಾಡ ತೊಟ್ಟವರ ಮುಖಭಂಗ ಮಾಡುವ ಬಂಡಾಯದ ಕಿಚ್ಚು ಈ ಸಾಲುಗಳಲ್ಲಿ ಕಾಣಬಹುದು. ಕಟುವಾದ ವಾಸ್ತವವನ್ನು ಇಲ್ಲಿ ಹೇಳಿದ್ದಾರೆ.
“ಬುದ್ಧನೆದೆಯಿಂದ ಬಸವನೆದೆಗೆ,ಬಸವನೆದೆಯಿಂದ ಬಾಬಾ ಸಾಹೇಬ ನೆದೆಗೆ, ಎದೆಯಿಂದ ಎದೆಗೆ ಹಣತೆ ಹಚ್ಚುತ್ತಿದ್ದೇವೆ.”ಈ ಎದೆಯಿಂದ-ಎದೆಗೆ ಹಣತೆ ಹಚ್ಚುವ ಪರಿಕಲ್ಪನೆಯೆ ವಿಶೇಷ. ಅಂಧಕಾರದ ಜಗತ್ತಿನಲ್ಲಿ ಬುದ್ಧ ಬಸವ ಬಾಬಾ ಸಾಹೇಬರಂತ ಧೀಮಂತ ಭರವಸೆಯ ಬೆಳಕುಗಳು ಅಂದು ಇಂದು ಮುಂದೆಯೂ ಬೇಕು ಮತ್ತದನ್ನು ನಾವು ಎದೆಯಿಂದ ಎದೆಗೆ ದಾಟಿಸಬೇಕು.
ಮುಂದೆ ‘ಹಂಸಪಕ್ಷ’ ಎಂಬ ಕವಿತೆಯಲ್ಲಿ, “ಎಲ್ಲಾ ಮರೆತಿದ್ದೇವೆ..!, ಮರೆಯುವುದನ್ನು ಕಲಿತಿದ್ದೇವೆ”ಎಂದು ಹೇಳುವ ಕವಿ ಹಳೆಯ ಸಂಕಟಗಳನ್ನು ನೆನೆಯುತ್ತಾ ಸಮತೆಯ ಹಾಡು ಹಾಡುತ್ತೇವೆ ಎಂದು ಹೇಳುವುದು ಇದೆಯಲ್ಲಾ…
ಮುಂದುವರೆದು, “ಬಡತನ ಬೇಗೆ, ಉದ್ಯೋಗ ವಂಚನೆ, ಮದುವೆಯ ಮೋಸ, ಕೊನೆಗೆ ಹೇಡಿತನನೇಣಿನ ಕುಣಿಕೆಗೂ ಬರಲಿಲ್ಲ ಕನಿಕರ, ಸಾವಿಗೆ ಮಾಡಿದ ಪ್ರಯತ್ನ..! ಬದುಕಿಗೇಕಿಲ್ಲ?”ನೇಣಿನ ಕುಣಿಕೆ ಇದು ಈ ಹೊತ್ತಿನ ದಲಿತ ಸಂವೇದನೆಯನ್ನು ಹೇಳುವುದರೊಂದಿಗೆ ಸಾವಿಗೆ ಮಾಡಿದ ಪ್ರಯತ್ನ ಬದುಕಿಗೇಕಿಲ್ಲ? ಎಂಬ ಪ್ರಶ್ನೆ ಹೊಸ ಭರವಸೆಯ ಬದುಕಿಗೆ ಕಾರಣವಾಗುವಂತಹ ಜೀವ ಪರ ಕಾಳಜಿ ಕವಿಯದ್ದು ಎಂದು ತಿಳಿಸುತ್ತದೆ.
‘ಕಾಲ’ ಎಂಬ ಕವಿತೆಯಲ್ಲಿ ಫಿಲಾಸಫಿಯ ಅಂಶಗಳು ಕಾಣಸಿಗುತ್ತವೆ. ಈ ಕವಿತೆಯ ಕೊನೆಯಲ್ಲಿ ಕವಿ, “ನಾಬಲ್ಲೆ ಕಾಲಕ್ಕೆ ಕಲ್ಲಿದ್ದಲನ್ನೂ, ವಜ್ರವಾಗಿಸುವ ಶಕ್ತಿಯಿದೆ ಎಂದು” ಎಂದು ಹೇಳುತ್ತಾರೆ ಈ ಸಾಲುಗಳು ಇಡೀ ಕವಿತೆಯಲ್ಲಿ ಹೆಚ್ಚು ಸದ್ದು ಮಾಡುತ್ತವೆ.
‘ಅಲ್ಲಮನಿಗೊಂದು ಅಂತರಂಗ ಪತ್ರ’ ಅಬ್ಬಾ..! ಈ ಪರಿಕಲ್ಪನೆಯೇ ಅಚ್ಚರಿ ಮೂಡಿಸುವಂತಿದೆ. ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾದ ಕವಿತೆ ಇದು. ಬಯಲಿನ ಜ್ಞಾನ ಯೋಗಿಗೆ ಇವತ್ತಿನ ತೊಗಲ ಯೋಗಿಯ ತಲ್ಲಣಗಳನ್ನು ಪತ್ರದ ರೂಪದಲ್ಲಿ ತಿಳಿಸುವುದು ಬಹಳ ಅನನ್ಯವಾದ ಪ್ರಯತ್ನ. ಕವಿ ಹೇಳುತ್ತಾರೆ,
“ದಲಿತ ಕವಿಗಳದ್ದಲ್ಲ ಜಾಸ್ತಿ ಆಯ್ತಂತೆ ಗದ್ದಲ, ಅಲ್ಲಿಯೂ ಅವರ ಪ್ರತಿಭಟನೆಗೆ ಹೆದರಿಪ್ರತ್ಯೇಕ ಬಂದೀಖಾನೆಯಲ್ಲಿ ಇರಿಸಿದ್ದಾರಂತೆ ನಿಜವೇ ಗುರುವೇ..!” ಎಂದು ಕೇಳುತ್ತಾ ಇಂದಿನ ಸರ್ಕಾರ ಆಡಳಿತ ವ್ಯವಸ್ಥೆ ಕುರಿತು ಅನುಭವ ಮಂಟಪದ ಅಲ್ಲಮನಿಗೆ ಅಪ್ಡೇಟ್ ನೀಡುವ ಕವಿ ಮುಂದೊಂದು ಪದ್ಯದಲ್ಲಿ ‘ನನಗೊಮ್ಮೆ ಪಟ್ಟಕೊಟ್ಟು ನೋಡಿ’ ಎಂದು ಧ್ವನಿಯೆತ್ತುತ್ತಾರೆ. ಈ ಕವಿತೆ ಇವತ್ತಿನ ವ್ಯವಸ್ಥೆ ಹೇಗಿರಬೇಕು ಮತ್ತು ಏನೆಲ್ಲಾ ಆಗಬೇಕು ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತದೆ.
ಕವಿತೆಗಿದು ಕಾಲವಲ್ಲ ಎನ್ನುವಾಗಲೇ ಕವಿತೆಗೆ ಇದುವೇ ಸುಭೀಕ್ಷವಾದ ಕಾಲ ಎನ್ನುವಂತೆ ಇಲ್ಲಿನ ಕವಿತೆಗಳು ರಚನೆಯಾಗಿವೆ.ಹೊಸ ತಲೆಮಾರಿನ ದಲಿತ ಸಂವೇದನೆಯನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಕವಿಯ ಈ ಪ್ರಯೋಗ ಮೆಚ್ಚುವಂಥದ್ದು. ಈ ಕೃತಿಗೆ ಎಲ್ಲಾ ಒಳಿತುಗಳು ಲಭಿಸಲಿ ಕವಿ-ಕವಿತೆಗಳ ಮುಖೇನ ಕಂಡ ಕನಸು ನನಸಾಗಲಿ ಕವಿಯ ಆಶಯದಂತೆ ಲೋಕವೆಲ್ಲ ‘ಸಮತೆಯ ಹಾಡು ಹಾಡುವಂತಾಗಲಿ’.

ಬರಹ – ದರ್ಶನ್ ಎಸ್ ಆರ್, ವಿದ್ಯಾರ್ಥಿ, ಡಾ. ಡಿ.ವಿ.ಜಿ.ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.