ಬಿಸಿಲ ಬೇಗೆಯಿಂದ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ ನಗರಕ್ಕೆ ಶನಿವಾರ ಸಂಜೆ ಬಿದ್ದ ಮುಂಗಾರು ಪೂರ್ವ ಮಳೆ ತಂಪೆರೆಯಿತು.
ಪ್ರಸ್ತುತ ವರ್ಷ ಭಾರೀ ಪ್ರಮಾಣದ ತಾಪಮಾನಕ್ಕೆ ಕೆಲ ಗ್ರಾಮಗಳಲ್ಲಿ ಜಲಮೂಲಗಳು ಬರಿದಾಗಲಾರಂಭಿಸಿದ್ದವು. ಅಂತರ್ಜಲ ಮಟ್ಟದಲ್ಲಿ ಇಳಿಕೆ ಕಂಡುಬಂದಿತ್ತು. ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಲಾರಂಭಿಸಿತ್ತು.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣದಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಕೆಲ ದಿನಗಳವರೆಗೆ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇತ್ತೀಚೆಗೆ ಜಿಲ್ಲೆ ಹಾಗೂ ತಾಲೂಕಿನ ಹಲವೆಡೆ ಚದುರಿದಂತೆ ಬೇಸಿಗೆ ಮಳೆಯಾದರೂ, ಶಿವಮೊಗ್ಗ ನಗರದಲ್ಲಿ ಮಳೆಯಾಗಿರಲಿಲ್ಲ. ಮತ್ತೊಂದೆಡೆ, ನಗರದಲ್ಲಿ ಬಿಸಿಲ ಬೇಗೆ ಹೆಚ್ಚಾಗಿತ್ತು. ತಾಪಮಾನದ ಪ್ರಮಾಣ 35 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಮಟ್ಟದಲ್ಲಿ ದಾಖಲಾಗುತ್ತಿತ್ತು. ಆದರೆ ಶನಿವಾರ ಸಂಜೆಯಿಂದ ಎಡಬಿಡದೆ ಮಳೆಯಾಗುತ್ತಿದೆ. ಇದರಿಂದ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಶಾಸಕಾದ್ವಯರ ಪತ್ರಿಕಾಗೋಷ್ಠಿ : ಸಧ್ಯದಲ್ಲಿಯೇ ನಿಜಾಂಶ ಹೊರಬರಲಿದೆ
ನಗರದ ಹಲವೆಡೆ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಗುತ್ತಿತ್ತು. ಶಿವಮೊಗ್ಗ ನಗರ ಮಾತ್ರವಲ್ಲದೆ ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಶನಿವಾರ ಸಂಜೆ ಭರ್ಜರಿ ಮಳೆಯಾದ ವರದಿಯಾಗಿದೆ.