ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಕೃಷಿ ಮಹಾ ವಿದ್ಯಾಲಯವನ್ನು ಸ್ಥಾಪಿಸಿ ಕರಾವಳಿ ಭಾಗದ 3 ಜಿಲ್ಲೆಗಳ ರೈತರು ಹಾಗೂ ರೈತರ ಮಕ್ಕಳಿಗೆ ಸ್ಥಳೀಯ ಕೃಷಿ ಪದ್ಧತಿ ಬಗ್ಗೆ ವೈಜ್ಞಾನಿಕವಾಗಿ ಹೆಚ್ಚಿನ ಮಾಹಿತಿ ದೊರೆತು, ಕೃಷಿಯಲ್ಲಿ ಪರಿಣಿತಿಯನ್ನು ಹೊಂದಲು ಕೃಷಿ ಮಹಾವಿದ್ಯಾಲಯ ಸಹಕಾರಿಯಾಗಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2025-26ನೇ ಸಾಲಿಗೆ ಮಂಡಿಸಲಿರುವ ಆಯವ್ಯಯದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವ ಬಗ್ಗೆ ಅನುದಾನವನ್ನು ಮೀಸಲಿರಿಸಿ ಅನುಮೋದನೆಯನ್ನು ನೀಡವಂತೆ ಉಡುಪಿ ಜಿಲ್ಲಾ ಕೃಷಿಕ ಸಮಾಜ ಆಗ್ರಹಿಸಿದೆ.
ಈ ಬಗ್ಗೆ ಇಂದು ಉಡುಪಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡ್ಗಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ಕರಾವಳಿಯ ಉಭಯ ಜಿಲ್ಲೆಗಳ ರೈತರ ಬಹುದಿನದ ಬೇಡಿಕೆಯಾಗಿದೆ. ಈಗಾಗಲೇ ಬ್ರಹ್ಮಾವರದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಡಿಪ್ಲೋಮ ಕಾಲೇಜುಗಳು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ, ಈ ಭಾಗದ ರೈತರ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಸಕಾರಾತ್ಮಕವಾಗಿ ರೈತರ ಆಶಾಕಿರಣವಾಗಿ ನಿರಂತರವಾಗಿ ಸ್ಪಂದಿಸುತ್ತಿದೆ, ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 350 ಎಕರೆಯಷ್ಟು ಜಮೀನು ಇದ್ದು, ಕೃಷಿ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳು ಪ್ರಸ್ತುತ ಚಾಲ್ತಿಯಲ್ಲಿದೆ. ಆದರೆ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಮೂರು ಜಿಲ್ಲೆಗಳನ್ನೊಳಗೊಂಡಂತೆ ಯಾವುದೇ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯಗಳು ಇಲ್ಲದಿರುವುದರಿಂದ, ಈ ಭಾಗದ ವಿದ್ಯಾರ್ಥಿಗಳು ಹಾಗೂ ರೈತರ ಮಕ್ಕಳಿಗೆ ಕೃಷಿ ವಿಜ್ಞಾನದಲ್ಲಿ ಪದವಿ ವ್ಯಾಸಂಗ ಮಾಡಿ ಪದವಿ ಪಡೆಯಲು ಹಿನ್ನಡೆಯಾಗಿರುತ್ತದೆ. ಆದ್ದರಿಂದ ಬ್ರಹ್ಮಾವರದಲ್ಲಿ ಪ್ರಸ್ತುತ ಇರುವ ಡಿಪ್ಲೋಮಾ ಕಾಲೇಜನ್ನು ಉನ್ನತೀಕರಿಸಿ ಕೃಷಿ ಮಹಾವಿದ್ಯಾಲಯವನ್ನಾಗಿ ಪರಿವರ್ತಿಸುವುದು ಈ ಭಾಗದ ರೈತರು ಹಾಗೂ ರೈತರ ಮಕ್ಕಳ ಬಹುದಿನದ ಬೇಡಿಕೆಯಾಗಿದ್ದು, ಈವರೆಗೂ ಮರೀಚಿಕೆಯಾಗಿರುತ್ತದೆ, ಬ್ರಹ್ಮಾವರದಲ್ಲಿರುವ ಡಿಪ್ಲೋಮಾ ಕಾಲೇಜಿನಲ್ಲಿ ಸುಸಜ್ಜಿತವಾದ ಕಾಲೇಜು ಕಟ್ಟಡ, ಪ್ರಯೋಗಶಾಲೆ, ವಿದ್ಯಾರ್ಥಿ ನಿಲಯಗಳ ಸೌಲಭ್ಯ, ಪೀಠೋಪಕರಣಗಳು, ಇತರೆ ಮೂಲಭೂತ ಸೌಕರ್ಯಗಳು ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಲಭ್ಯವಿದ್ದು ಸರ್ಕಾರವು ಹೆಚ್ಚಿನ ಆರ್ಥಿಕ ಹೊರೆ ಇಲ್ಲದಂತೆ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸಲು ಅವಕಾಶವಿದೆ ಎಂದು ಹೇಳಿದರು.
ಅದರ ಜೊತೆಯಲ್ಲಿ ಕುಮ್ಮಿ ಹಕ್ಕು ಮತ್ತು ಗೇರು ಲೀಸ್ ಮಂಜೂರಾತಿ ಪತ್ರವನ್ನು ರೈತರಿಗೆ ನೀಡಬೇಕು, ಶೂನ್ಯ ಪ್ರತಿಶತ ಬಡ್ಡಿದರದಲ್ಲಿ ಸಾಲವನ್ನು ಪ್ರಸ್ತುತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದ್ದು ಇನ್ನು ಅನುಷ್ಠಾನ ಗೊಂಡಿಲ್ಲಾ ಶೀಘ್ರ ಅನುಷ್ಠಾನಗೊಳಿಸಬೇಕು, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳಿಗೆ ರಕ್ಷಣೆ ಒದಗಿಸಲು ಸೋಲಾರ್ ಬೇಲಿಯನ್ನು ನಿರ್ಮಾಣ ಮಾಡುವರೇ, 90% ಪ್ರತಿಶತ ಸಹಾಯಧನ ನೀಡುವಂತೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ್ ಕೃಷಿಕ ಸಮಾಜದ ರಾಜ್ಯ ಸದಸ್ಯರಾದ ಪ್ರದೀಪ್ ಹೆಬ್ಬಾರ್, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ವೈಲುಂಠ ಹೆರ್ಳ ಉಪಸ್ಥಿತರಿದ್ದರು
