ತನಿಖೆ ಮತ್ತು ವಿಚಾರಣೆ ನಡೆಸಿದ್ದ ಜಿಎಸ್‌ಟಿ ಅಧಿಕಾರಿಯೊಬ್ಬರು ತೆರಿಗೆದಾರರ ಹಣದಿಂದ ಸಾಕಷ್ಟು ಖರ್ಚು ಮಾಡಿದ್ದ ಪ್ರಕರಣದಲ್ಲಿ ಆರೋಪಿ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 5 ಲಕ್ಷ ರೂ. ದಂಡವನ್ನೂ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಉತ್ತರ ಪ್ರದೇಶ ಮೂಲದ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆ (GST) ಸೂಪರಿಂಟೆಂಡೆಂಟ್ ಜಿತೇಂದ್ರ ಕುಮಾರ್ ಡಾಗೂರ್ ಅವರು ಉತ್ತರ ಕನ್ನಡ ವಿಭಾಗದ ಹೊನ್ನಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಅವರು ದೂರುದಾರರಿಂದ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ಆಗಿ ಸಿಕ್ಕಿಬಿದ್ದಿದ್ದರು. ಅವರನ್ನು 2021ರ ಮಾರ್ಚ್‌ನಲ್ಲಿ ಸಿಬಿಐ ಬಂಧಿಸಿತ್ತು.
ತೆರಿಗೆ ವಿಚಾರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿಸಿದ್ದಾರೆ. ಅರ್ಜಿದಾರರಿಗೆ ವಿಧಿಸಿದ್ದ ದಂಡ ಮನ್ನಾ ಮಾಡಲು 50,000 ರೂ.ಗಳ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆ, ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಡಾಗೂರ್ ಅವರು ದೇಶದ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ ಅಂತಹ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರೆ, ತೆರಿಗೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇಂಥ ಕೃತ್ಯಗಳಿಂದ ದೇಶದ ಆರ್ಥಿಕ ಸ್ಥಿತಿ ಕೂಡ ಹಾಳಾಗುತ್ತದೆ ಎಂದು ನ್ಯಾಯಮೂರ್ತಿ ಎಚ್‌ಎ ಮೋಹನ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.