ಚಲಿಸುತ್ತಿದ್ದಾಗಲೇ ಕೆಎಸ್‌ಆರ್‌ಟಿಸಿ ಬಸ್‌ನ ಸ್ಠೇರಿಂಗ್ ತುಂಡಾಗಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಬೈಕ್‌ವೊಂದಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ತಿಟ್ಟಮಾರನಹಳ್ಳಿ ಬಳಿ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಕೋಟಮಾರನಹಳ್ಳಿ ಗ್ರಾಮದ ಸಿದ್ದಯ್ಯ (60) ಮತ್ತು ಅವರ ಮಗ ಅರುಣ್ (27) ಮೃತಪಟ್ಟಿದ್ದಾರೆ.
ತಂದೆ-ಮಗ ಇಬ್ಬರು ಬೈಕ್‌ನಲ್ಲಿ ಚನ್ನಪಟ್ಟಣಕ್ಕೆ ತೆರಳುತ್ತಿದ್ದರು. ಈ ವೇಳೆ, ಬೈಕ್‌ಗೆ ಎದುರಿನಿಂದ ಬಂದ ಬಸ್ ಢಿಕ್ಕಿ ಹೊಡೆದಿದೆ. ಅರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಯ್ಯ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ದಾರಿ ಮಧ್ಯೆಯೇ ಅವರೂ ಮೃತಪಟ್ಟಿದ್ದಾರೆ.
ಬಸ್ ಹಳೆಯದಾಗಿದ್ದರಿಂದ ಚಲಿಸುವಾಗಲೇ ಅದರ ಸ್ಟೇರಿಂಗ್ ಕಟ್ ಆಗಿದೆ. ಹೀಗಾಗಿ, ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಢಿಕ್ಕಿಯಾಗಿದೆ. ಕರೆಯ ಏರಿ ಮೇಲೆ ಘಟನೆ ನಡೆದಿದ್ದು, ಕರೆಯ ಬಳಿ ರಸ್ತೆಗೆ ತಡೆಗೋಡೆ ಇದ್ದ ಕಾರಣ, ಬಸ್ ಬ್ಯಾರಿಕೇಡ್‌ಗೆ ಗುದ್ದಿ, ನಿಂತಿದೆ. ಒಂದು ವೇಳೆ, ಬ್ಯಾರಿಕೇಡ್ ಇಲ್ಲದಿದ್ದಾರೆ, ಬಸ್ ಕೆರೆಗೆ ಉರುಳುವ ಅಪಾಯವಿತ್ತು ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.