ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟ ಬೃಹತ್ ಬೆಂಗಳೂರು ಆಡಳಿತ ಮಸೂದೆ ಖಂಡಿಸಿ ತಿದ್ದುಪಡಿ ಮಾಡಿಸುವ ಉದ್ದೇಶದಿಂದ ಬೆಂಗಳೂರು ನವನಿರ್ಮಾಣ ಪಕ್ಷ(ಬೆನಪ) ಮಾರ್ಚ್ 16ರಂದು ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮತ್ತು ಜಾಗೃತಿ ರ‍್ಯಾಲಿಗೆ ಕರೆ ಬೀಡಿದೆ.
“ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಹಾನಗರ ಬೃಹತ್ ಬೆಂಗಳೂರು ಆಡಳಿತ ಮಸೂದೆ ಬೆಂಗಳೂರಿನ ಸ್ವಾಯತ್ತ ಆಡಳಿತ ಹಕ್ಕನ್ನು ದುರ್ಬಲಗೊಳಿಸುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಶಾಸಕರ ನಿಯಂತ್ರಣವನ್ನು ಬಲಪಡಿಸುವ ಮೂಲಕ ಭಾರತೀಯ ಸಂವಿಧಾನದ 243ಡಬ್ಲ್ಯೂ ವಿಧಿಯನ್ನು ಉಲ್ಲಂಘಿಸುತ್ತದೆ” ಎಂದು ಬೆಂಗಳೂರು ನವನಿರ್ಮಾಣ ಪಕ್ಷ(ಬೆನಪ) ತೀವ್ರವಾಗಿ ವಿರೋಧಿಸಿದೆ.
“ಈ ಮಸೂದೆಯು ಬೆಂಗಳೂರಿನ ಸ್ವ-ಆಡಳಿತದ ಹಕ್ಕಿನ ಮೇಲಿನ ಹಲ್ಲೆಯಾಗಿದ್ದು, ನಗರದ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಪುರಸಭೆಯ ವ್ಯವಹಾರಗಳಲ್ಲಿ ರಾಜ್ಯ ಸರ್ಕಾರ ಮತ್ತು ಶಾಸಕರ ಹಸ್ತಕ್ಷೇಪವನ್ನು ಬಲಪಡಿಸುತ್ತದೆ. ನಗರದ ಮೇಯರ್ ಮತ್ತು ಪುರಸಭೆಗೆ ಅಧಿಕಾರ ನೀಡುವ ಬದಲು, ಮಸೂದೆಯು ಬೆಂಗಳೂರಿನ ಆಡಳಿತದಲ್ಲಿ ಶಾಸಕರು ಮತ್ತು ರಾಜ್ಯ ಸರ್ಕಾರದ ಹಸ್ತಕ್ಷೇಪವನ್ನು ಬಲಪಡಿಸುತ್ತದೆ” ಎಂದು ಬೆನಪ ವಾದಿಸಿದೆ.
ಬೆನಪದ 23 ಬೇಡಿಕೆಗಳು ಮತ್ತು ಆನ್‌ಲೈನ್ ಮನವಿ
“ಬೆಂಗಳೂರು ನವನಿರ್ಮಾಣ ಪಕ್ಷ(ಬೆನಪ) ಈಗಾಗಲೇ 23 ಪ್ರಮುಖ ನಿರ್ಧಾರಗಾರರಿಗೆ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದು, ಈ ಮಸೂದೆಯನ್ನು ತಕ್ಷಣ ತಿದ್ದುಪಡಿ ಮಾಡಬೇಕು ಎಂಬ ಆಗ್ರಹದೊಂದಿಗೆ ಆನ್‌ಲೈನ್ ಮನವಿ ಆರಂಭಿಸಿದೆ. ಜಿಬಿಜಿಬಿ ಸ್ಥಳೀಯ ಆಡಳಿತದ ಅಧಿಕಾರವನ್ನೂ ಜನರು ಪಾಲ್ಗೊಳ್ಳುವ ಅವಕಾಶವನ್ನೂ ಮರೆಸುತ್ತದೆ. ಈ ಮಸೂದೆ ಮೇಯರ್‌ಗೆ ನಿರ್ಧಾರ ಕೈಗೊಳ್ಳುವ ಪ್ರಾಮಾಣಿಕ ಅಧಿಕಾರ ನೀಡುವುದಿಲ್ಲ. ಶಾಸಕರು ಹಾಗೂ ರಾಜ್ಯ ಸರ್ಕಾರ ಬೆಂಗಳೂರು ಪಾಲಿಕೆಯ ಕೆಲಸಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸುವಂತೆ ಮಾಡುತ್ತದೆ. ಸರ್ಕಾರವನ್ನು ಜನರಿಗೆ ಜವಾಬ್ದಾರಿಯುತಗೊಳಿಸದೆ, ಬದಲಾಗಿ ಆಡಳಿತವನ್ನು ಜನತೆಯಿಂದ ದೂರ ಮಾಡುತ್ತದೆ” ಎಂದು ಪಕ್ಷದ ಸಂಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮದ್ದೂರು | ಬದಲಾಗದ ಪೌರಕಾರ್ಮಿಕರ ಬದುಕು; ನಗರಕೆರೆ ಗ್ರಾ.ಪಂ ಜನಪ್ರತಿನಿಧಿ, ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ
ವಾರ್ಡ್ ಸಮಿತಿಗಳನ್ನು ಬಲಪಡಿಸಬೇಕು
“ಬಿಬಿಎಂಪಿ ಕಾಯ್ದೆಯ ಪ್ರಕಾರ ಪ್ರತಿ ತಿಂಗಳು ವಾರ್ಡ್ ಸಮಿತಿ ಸಭೆ ನಡೆಸಲು ಕಡ್ಡಾಯವಿದ್ದರೂ, ಕೇವಲ ಶೇ.32ರಷ್ಟು ಸಭೆಗಳು ಮಾತ್ರ ನಡೆದಿವೆ. ನಗರಾಭಿವೃದ್ಧಿ ಯೋಜನೆಯಲ್ಲಿ ಜನರು ಭಾಗವಹಿಸಬೇಕು. ಶಾಸಕರು ಅಥವಾ ರಾಜ್ಯ ಸರ್ಕಾರವಲ್ಲ. ವಾರ್ಡ್ ಸಮಿತಿಗಳು ʼಏರಿಯಾ ಸಭಾʼಗಳಿಂದ ನೇರ ಮಾಹಿತಿಯನ್ನು ಪಡೆದು, ಸ್ಥಳೀಯ ಅಭಿವೃದ್ಧಿ ಯೋಜನೆ ರೂಪಿಸುವಂತಾಗಬೇಕು. ಬೆಂಗಳೂರು ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿ ಅಥವಾ ನಗರ ಪಾಲಿಕೆ ನಿರ್ಧಾರಗಳಿಗೆ ಮಾತ್ರ ಅವಲಂಬಿತವಾಗಬಾರದು. ವಾರ್ಡ್ ಮಟ್ಟದ ಕಾಮಗಾರಿಗಳ ಸ್ವತಂತ್ರವಾಗಿ ಪರಿಶೀಲನೆ ನಡೆಸುವ ಅಧಿಕಾರ ಕೂಡಾ ಅವರಿಗೆ ನೀಡಬೇಕು ಎಂದು ಆಡಳಿತ ಮಂಡಳಿ ಸದಸ್ಯೆ ಮತ್ತು ಬೆಂಗಳೂರು ನವನಿರ್ಮಾಣ ಪಕ್ಷದ ಬೆಂಗಳೂರು ದಕ್ಷಿಣದ ವಲಯದ ನಾಯಕಿ ಪೂಂಗೊತೈ ಪರಮಶಿವಂ ತಿಳಿಸಿದರು.