ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಪಜಾತಿಗಳಿಗೆ ಒಳಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ಅಪಸ್ವರ ಎತ್ತಿರುವ ಬಿಎಸ್‌ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉ.ಪ್ರ.ಮಾಜಿ ಸಿಎಂ ಮಾಯಾವತಿ ಅವರ ನಿಲುವನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆಯ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಸಾಮೂಹಿಕ ರಾಜಿನಾಮೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಮಾತನಾಡಿ, ಒಳಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನ್ನು ವಿರೋಧಿಸಿರುವ ಮಾಯಾವತಿ ನೀಡಿರುವ ಹೇಳಿಕೆ ನಮಗೆ ಅಸಮಾಧಾನ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಿಂದ ಐವರು ನಾಯಕರು ಅಹವಾಲು ಸಲ್ಲಿಸಲು ಹೋದಾಗ ಸೌಜನ್ಯಕೂ ಮಾತನಾಡಿಸದೆ ಅವಮಾನಿಸಿದ್ದಾರೆ. ಇದೇ ರೀತಿ ಆಂದ್ರ ಪ್ರದೇಶ ಮತ್ತು ತೆಲಂಗಾಣ ನಾಯಕರಿಗೂ ಆಗಿದೆ. ಇದೆಲ್ಲದರಿಂದ ನಮಗೆ ಅಸಮಾಧಾನ ಇದ್ದು, ಬಹುಜನ ಸಮಾಜ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕಾನ್ಶೀರಾಂ ರವರ ಸಿದ್ದಾಂತಗಳಿಂದ ದೂರಸರಿದಿದೆ. ಹಾಗೂ ಪಕ್ಷದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಳೆದುಕೊಂಡಿದ್ದು ಅಲ್ಲಿ ನಿಕೃಷ್ಟ ಸಮುದಾಯಗಳ ಕೂಗು ಅರಣ್ಯ ರೋಧನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಯಾವತಿ ಅವರ ಹೇಳಿಕೆ ವಿರೋಧಿಸಿ ಈಗಾಗಲೇ ಬಿಎಸ್‌ಪಿ ರಾಜ್ಯಾಧ್ಯಕ್ಷರಿಗೆ ಸಾಮೂಹಿಕವಾಗಿ ರಾಜಿನಾಮೆ ನೀಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಪುನರ್ ರಚಿಸುತ್ತೇವೆ. ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಕೂಡ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ 14 ಪುಟಗಳ ಪತ್ರ ಬರೆದಿದ್ದು, ನಮಗೆ ಅಸಮಾಧಾನ ಇರುವುದರಿಂದ ಕರ್ನಾಟಕ ಬಹುಜನ ಸಮಾಜ ಪಾರ್ಟಿ ಕಟ್ಟುವುದಾಗಿ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾ ಸಂಯೋಜಕ ಕೆ.ಎನ್.ದೊಡ್ಡೆಟ್ಟೆಪ್ಪ, ಸಂಯೋಜಕ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಕಾರ್ಯದರ್ಶಿಗಳಾದ ಶ್ರೀನಿವಾಸ್, ಎಂ.ಜಗದೀಶ್, ಲಕ್ಷ್ಮಕ್ಕ, ರಾಘವೇಂದ್ರ, ಮಹಾಲಿಂಗಪ್ಪ, ಚಂದ್ರಣ್ಣ, ರಂಗಸ್ವಾಮಿ, ನರಸಿಂಹಮೂರ್ತಿ, ಗುರುಸ್ವಾಮಿ, ಗೋವಿಂದಪ್ಪ, ರಾಜೇಶ್ ಹಾಜರಿದ್ದರು.
