ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ಅವರು ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಮೈಸೂರು ನಗರದ ಅಶೋಕಪುರಂನಲ್ಲಿರುವ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ “ಭಗವಾನ್ ಬುದ್ಧರ 2569ನೇ ಜಯಂತಿ” ಕಾರ್ಯಕ್ರಮದಲ್ಲಿ ‘ ಬುದ್ಧ ಎಂದರೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವ ದೊಡ್ಡ ಶಕ್ತಿ ‘ ಎಂದರು.
” ಭಗವಾನ್ ಬುದ್ಧರು ಜೀವನದ ಸತ್ಯ ಸಂಗತಿಗಳ ಬಗ್ಗೆ ತಿಳಿಸಿ ‘ ನಿನಗೆ ನೀನೆ ಬೆಳಕು ‘ ಎಂದು ಜಗತ್ತಿಗೆ ಸಾರಿದ್ದಾರೆ. ಅಲೌಕಿಕ ವಿಚಾರಗಳನ್ನು ಬದಿಗೊತ್ತಿ ವೈಜ್ಞಾನಿಕ, ವೈಚಾರಿಕೆ ಸಂಗತಿಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ವೈಜ್ಞಾನಿಕ ಅಲೋಚನೆಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು. ವಿದೇಶಕ್ಕೆ ತೆರಳಿದಾಗ ನಾವು ಬುದ್ದನ ನಾಡಿನಿಂದ ಬಂದಿದ್ದೇವೆ ಎಂದು ಹೇಳುತ್ತೇವೆ. ನಮಗೆ ಬುದ್ಧ ಬೇಕು ಎನ್ನುತ್ತೇವೆ. ಬುದ್ಧನಿಗೆ ಬಡವರ ಬಗ್ಗೆ ಕರುಣೆ, ಮಮಕಾರ ಅಗಾದವಾಗಿತ್ತು. ಬುದ್ಧ ಎಂಬುದೇ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ದೊಡ್ಡ ಶಕ್ತಿ ” ಎಂದು ನುಡಿದರು.
‘ ಬಾಬಾ ಸಾಹೇಬರು ಭಗವಾನ್ ಬುದ್ದರ ಪರಮ ಅನುಯಾಯಿಗಿದ್ದರು. ಭಾರತದಲ್ಲಿ ಶ್ರೇಷ್ಠ ಚಿಂತಕರಿದ್ದರೆ ಅದು ಡಾ.ಬಿ.ಆರ್. ಅಂಬೇಡ್ಕರ್ ಎಂದು ಲೋಹಿಯಾ ಅವರು ಹೇಳಿದ್ದಾರೆ. ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿದರೆ ಬಾಬಾ ಸಾಹೇಬರನ್ನು ಸಂಪೂರ್ಣವಾಗಿ ಅರಿಯುವುದು ಸುಲಭವಾಗುತ್ತದೆ ‘ ಎಂದರು.

ನಮ್ಮ ಏಳಿಗೆ ಇರುವುದು ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಸಂವಿಧಾನ ಆಶಯಗಳ ಜಾರಿಯಲ್ಲಿ. ಈಡೀ ಭಾರತ ದೇಶದಲ್ಲೇ ನಮ್ಮ ಸರ್ಕಾರವು ಸಂವಿಧಾನವನ್ನು ಮನೆ-ಮನೆಗೆ ತಲುಪಿಸಿದೆ. ಒಂದು ಚಳುವಳಿಯಂತೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ರನ್ನು ಪಾಲಿಸಿದರೆ ವಿಶ್ವಮಾನವನ ಘನತೆ ಬರುತ್ತದೆ. ಧರ್ಮದ ಆಯ್ಕೆ ಐಚ್ಛಿಕ ವಿಷಯ. ಅಂತಿಮವಾಗಿ ನಮಗೆ ಧರ್ಮ ಬೇಕು. ಆ ಧರ್ಮವು ನಮಗೆ ಹಿತಕರವಾಗಿರಬೇಕು. ತಾರತಮ್ಯ, ಅಸಮಾನತೆಯನ್ನು ಬೋಧಿಸುವುದು ಧರ್ಮವೇ ಅಲ್ಲ ಎಂದು ತಿಳಿಸಿದರು.

ಬಾಬಾ ಸಾಹೇಬರು ದೇಶದ ಅಭಿವೃದ್ದಿ ಕುರಿತು ಎಲ್ಲಾ ವಿಷಯಗಳನ್ನು ತಿಳಿಸಿದ್ದಾರೆ. ಪರದೇಶದ ನಡುವೆ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಪರಿಹರಿಸುವ ರಾಜತಾಂತ್ರಿಕ ವಿಚಾರಗಳನ್ನು ಮಂಡಿಸಿದ್ದಾರೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಅಗತ್ಯವಾಗಿದೆ. ದುರಾಸೆಯಿಂದ ದೂರವಾಗಿ ಮನುಷ್ಯತ್ವದಿಂದ ಕೂಡಿದ ಜೀವನ ನಡೆಸಲು ಬುದ್ಧನನ್ನು ಅನುಸರಿಸೋಣ ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಬುದ್ಧನ ಸಂದೇಶ ಇಡೀ ಮಾನವ ಕುಲಕ್ಕೆ ದಿಕ್ಸೂಚಿ : ವಿನಾಯಕ ನರ್ವಡೆ
ಕಾರ್ಯಕ್ರಮದಲ್ಲಿ ಕರ್ನಾಟಕ ಬಿಕ್ಕು ಮಹಾ ಸಂಘದ ಕಾರ್ಯದರ್ಶಿ ಕಲ್ಯಾಣ ಸಿರಿ ಬಂತೇಜಿ, ಶಾಸಕ ಶ್ರೀವತ್ಸ, ಭಾಗ್ಯಲಕ್ಷ್ಮೀ ಶ್ರೀನಿವಾಸ ಪ್ರಸಾದ್, ಮಾಜಿ ಮೇಯರ್ ಪುರುಷೋತ್ತಮ್, ವಕೀಲ ಶಿವರುದ್ರಪ್ಪ ಸೇರಿದಂತೆ ಇನ್ನಿತರರು ಇದ್ದರು.