ಕೊಡಗು ಜಿಲ್ಲೆ, ಮಡಿಕೇರಿ ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ‘ ಬುದ್ಧನ ಸಂದೇಶ ಇಡೀ ಮಾನವ ಕುಲಕ್ಕೆ ದಿಕ್ಸೂಚಿ ‘ ಎಂದು ಅಭಿಮತ ವ್ಯಕ್ತಪಡಿಸಿದರು.
” ಬುದ್ಧ ಇಡೀ ವಿಶ್ವಕ್ಕೆ ಶಾಂತಿ, ಸಹನೆ, ಸಹಭಾಳ್ವೆ, ಸಹೋದರತೆಯನ್ನು ಬಿತ್ತಿದರು. ಭಾರತದಲ್ಲಿ ಹುಟ್ಟಿ ಬೆಳೆದು ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೇರಿಕ ಭೇಟಿ ಸಂದರ್ಭದಲ್ಲಿ ‘ ಯುದ್ಧದ ನಾಡಿನಿಂದ ಬಂದಿಲ್ಲ, ಬುದ್ಧನ ನಾಡಿನಿಂದ ಬಂದಿದ್ದೇನೆ ’ ಎಂಬ ಸಂದೇಶ ಸಾರಿದ್ದರು.”
” ಭಗವಾನ್ ಬುದ್ಧರ 2587 ನೇ ಜನ್ಮ ದಿನಾಚರಣೆಯನ್ನು ಭಾರತವಲ್ಲದೆ ಥೈಲಾಂಡ್, ಚೀನಾ, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ, ಜಪಾನ್, ಟಿಬೆಟ್ ಹೀಗೆ ವಿವಿಧ ರಾಷ್ಟ್ರಗಳಲ್ಲಿ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಬುದ್ಧ ಪೂರ್ಣಿಮೆಯನ್ನು ವಿಶ್ವದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಬುದ್ಧನ ಸಂದೇಶಗಳು ಇಂದಿಗೂ ಸಹ ಪ್ರಸ್ತುತವಾಗಿದ್ದು, ಸ್ಫೂರ್ತಿದಾಯಕವಾಗಿದೆ ” ಎಂದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಾಯನ ಕೇಂದ್ರದ ಸಮನ್ವಯಾಧಿಕಾರಿ ಡಾ. ಕೆ. ಎಚ್. ಮುಸ್ತಫಾ ಮಾತನಾಡಿ ” ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ, ಮಹಾನ್ ದಾರ್ಶನಿಕ. ಸಿದ್ದಾರ್ಥ ರಾಜ ವಂಶದ ಕುಡಿಯಾಗಿದ್ದು, ಸಕಲ ವೈಬೋಗಗಳನ್ನು ತ್ಯಜಿಸಿ, ಜ್ಞಾನೋದಯ ಪಡೆದು ಗೌತಮ ಬುದ್ಧನಾಗುತ್ತಾನೆ. ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಬೋಧಿಸಿದ್ದಾರೆ. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯ ದಿನವನ್ನು ಸ್ಮರಿಸಲು ಪ್ರತೀ ವರ್ಷ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ ” ಎಂದರು.

ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ಕೃಷ್ಣಪ್ಪ ಮಾತನಾಡಿ ‘ ಬುದ್ಧ ಎಂದರೆ ಜ್ಞಾನ, ಆಸೆಯೇ ದುಃಖಕ್ಕೆ ಮೂಲ ಎಂಬುದನ್ನು ಬುದ್ಧ ಸಾರಿದ್ದಾರೆ. ಸಾಮ್ರಾಟ್ ಅಶೋಕ, ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಬುದ್ಧನ ಶಾಂತಿ ಸಂದೇಶಗಳನ್ನು ಅನುಸರಿಸಿದ್ದಾರೆ. ಶಾಂತಿ ದೂತರಾಗಿ ಕೆಲಸ ಮಾಡಿದ್ದಾರೆ ‘ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ ‘ ಬುದ್ದ ಸಹಜತೆ, ಪರಿಸರ ಹಾಗೂ ನಿಸರ್ಗದ ತತ್ವದಂತೆ ನಡೆದುಕೊಳ್ಳುತ್ತಾರೆ. ಗೌತಮ ಬುದ್ಧ ಮಹಾ ಬೆಳಕು, ಚೈತನ್ಯದ ಚಿಲುಮೆ ಎಂದರೆ ತಪ್ಪಾಗಲಾರದು. ಎಲ್ಲರನ್ನು ಪ್ರೀತಿಸಬೇಕು ಮತ್ತು ಗೌರವಿಸುವುದು ಆದ್ಯ ಕರ್ತವ್ಯವಾಗಿದೆ ‘ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ‘ ಗೌತಮ ಬುದ್ಧರು ಶಾಂತಿಮಂತ್ರವನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಎಲ್ಲರೂ ಸಮಾನವಾಗಿ ಸಹೋದರತೆಯಿಂದ ಬದುಕು ನಡೆಸಬೇಕು ಎಂಬುದು ಗೌತಮ ಬುದ್ಧರ ಆಶಯವಾಗಿತ್ತು ‘ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಭಾರತ ವೈವಿಧ್ಯಮಯ ದೇಶ; ಬಹುತ್ವದಿಂದ ಕೂಡಿ ನಾವೆಲ್ಲಾ ಒಂದಾಗಿದ್ದೇವೆ : ಸಚಿವ ಡಾ. ಹೆಚ್. ಸಿ. ಮಹದೇವಪ್ಪ
ನಗರಸಭೆ ಸದಸ್ಯರಾದ ಸತೀಶ್, ದಸಂಸ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ, ಪ್ರೇಮ್ ಕುಮಾರ್, ಎಸ್.ಕೆ. ಸ್ವಾಮಿ, ನಿವೃತ್ತ ಶಿಕ್ಷಕ ಬಿ.ಸಿ. ಶಂಕರಯ್ಯ, ದಸಂಸ ಭೀಮವಾದ ಸಂಘಟನಾ ಸಂಚಾಲಕ ಕೆ.ಬಿ.ರಾಜು ಸೇರಿದಂತೆ ಇನ್ನಿತರರು ಇದ್ದರು.