ಪ್ರಪಂಚದ 28ಕ್ಕೂ ಹೆಚ್ಚು ದೇಶಗಳಲ್ಲಿ ಬೌದ್ಧ ಧರ್ಮವನ್ನು ಅನುಸರಿಸಲಾಗುತ್ತಿದೆ. ಆದರೆ, ಬೌದ್ಧ ಧರ್ಮ ಹುಟ್ಟಿದ ಈ ನೆಲದಲ್ಲಿ ಅದು ಮರುಹುಟ್ಟು ಪಡೆಯಬೇಕಿದೆ. ಈ ದೇಶದ, ರಾಜ್ಯದ ಜನ ಮೂಡನಂಬಿಕೆ ಅಂಧಾಚಾರಗಳಲ್ಲಿ ಬದುಕುತ್ತಿದ್ದಾರೆ ಎಂದು ಪ್ರಜಾಪರಿವರ್ತನ ವೇದಿಕೆಯ ರಾಜ್ಯಾಧ್ಯಕ್ಷ ಬಿ. ಗೋಪಾಲ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಪ್ರಜಾಪರಿವರ್ತನಾ ವೇದಿಕೆ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮ ಮತ್ತು ಜೋಗೇಂದ್ರನಾಥ ಮಂಡಲ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಮಾಜದಿಂದ ನನಗೇನು ಎನ್ನುವುದಕ್ಕಿಂತ, ನನ್ನಿಂದ ಸಮಾಜಕ್ಕೇನು ಎಂಬುದನ್ನು ಅರಿತುಕೊಳ್ಳಬೇಕು. ಅದನ್ನು ಇತರರಿಗೂ ತಿಳಿಸುವ ಕೆಲಸವಾಗಬೇಕು” ಎಂದರು.
“ಜೋಗೇಂದ್ರನಾಥ ಮಂಡಲ್ ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಪ್ರಭಾವಿ ಹೋರಾಟಗಾರರಾಗಿದ್ದಾರೆ. ಅಲ್ಲಿನ ಸರ್ಕಾರಕ್ಕೆ, ಸರ್ಕಾರ ರಚನೆಗೆ ಕೇವಲ ಒಂದು ಮತದ ಅಗತ್ಯವಿದ್ದಾಗ ಇವರು ಯಾವ ಸರ್ಕಾರ ಎಸ್‌ಸಿ/ಎಸ್‌ಟಿ ಶಾಲೆಗಳನ್ನು ತೆರೆಯಲು 5 ಲಕ್ಷ ಅನುದಾನವನ್ನು ಕೊಡುತ್ತದೆಯೋ ಮತ್ತು ಪೊಲೀಸ್ ಆಯ್ಕೆಯಲ್ಲಿ ಈ ಸಮುದಾಯಗಳಿಗೆ ಅವಕಾಶ ನೀಡುತ್ತದೆಯೋ ಆ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ ಎಂದಿದ್ದರು. ಅಂಬೇಡ್ಕರ್ ರಾಜ್ಯಸಭೆಗೆ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು” ಎಂದು ತಿಳಿಸಿದರು.
“ದೇಶ ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋದ ಮಂಡಲ್ ಅವರು ಅಲ್ಲಿನ ಪಾರ್ಲಿಮೆಂಟ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮತ್ತೆ, ಭಾರತಕ್ಕೆ ಹಿಂದಿರುಗಿದರು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಡಿ ಈಶ್ವರಪ್ಪ, “ಮೂಲ ನಿವಾಸಿಗಳಾದ ಎಸ್‌ಸಿ/ಎಸ್‌ಟಿ ಸಮುದಾಯ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪುತ್ತಿದೆ. ವಿವಿಧ ಆಸೆ ಆಮಿಷಗಳಿಗೆ ಬಲಿಯಾಗುತ್ತಿದೆ. ಅಂಬೇಡ್ಕರ್ ಮತ್ತು ಅವರ ಮೂಲತತ್ವ ಆಶಯಗಳನ್ನು ಮರೆತಿದೆ. ಸಮುದಾಯಗಳನ್ನು ಮರಳಿ ಸರಿದಾರಿಗೆ ತರಬೇಕಾಗಿದೆ. ದೇಶದ ಜನ ಅನುಭವಿಸುತ್ತಿರುವ ಸಮಾಧಾನದ ಬದುಕಿಗೆ ಸಂವಿಧಾನ ಕಾರಣವಾಗಿದೆ. ಸಂವಿಧಾನದ ಆಶಯಗಳನ್ನು ಸಮುದಾಯಕ್ಕೆ ತಿಳಿಸಿ ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ರೋಷನ್ ಮುಲ್ಲಾ ಸೇರಿದಂತೆ ಹಲವರು ಇದ್ದರು.