ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಆಡಳಿತ ವ್ಯವಸ್ಥೆಗೆ ಹೊಸ ರೂಪ ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ, ಭಟ್ಕಳ ಪುರಸಭೆಯೊಂದಿಗೆ ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿಯನ್ನು ಸಂಯೋಜಿಸಿ, ಭಟ್ಕಳ ನಗರಸಭೆಯನ್ನಾಗಿ (City Municipal Council) ಮೇಲ್ದರ್ಜೆಗೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ತೀರ್ಮಾನದಂತೆ, ಈಗಿನ ಪುರಸಭೆ ವ್ಯಾಪ್ತಿಯು ವಿಸ್ತರಿಸಿ, ಭೌಗೋಳಿಕವಾಗಿ, ಜನಸಂಖ್ಯಾ ಆಧಾರದ ಮೇಲೆ ಹಾಗೂ ಸೌಲಭ್ಯಗಳ ಅಗತ್ಯತೆಗಳನ್ನು ಪರಿಗಣಿಸಿ, ನೂತನ ನಗರಸಭೆ ರಚನೆ ಮಾಡಲಾಗುವುದು.
ʼಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿಯನ್ನು ಒಗ್ಗೂಡಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆ ತಿರ್ಮಾನ ತೆಗೆದುಕೊಂಡಿದೆʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಭಟ್ಕಳ ತಾಲೂಕಿಗೆ ಆರ್ಥಿಕವಾಗಿ ಮಹತ್ವ ಹೆಚ್ಚಳವಾಗಲಿದೆ. ಈ ಮೇಲ್ದರ್ಜೆ ನೀಡುವ ನಿರ್ಧಾರದಿಂದ ಭಟ್ಕಳದ ಪಟ್ಟಣದ ಅಭಿವೃದ್ಧಿಗೆ ಬಲ ಸಿಗಲಿದೆ. ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಅನುದಾನ ಲಭಿಸಬಹುದಾಗಿದೆ. ನಗರದ ವ್ಯಾಪ್ತಿಯ ವ್ಯಾಪಾರದ ವಿಸ್ತರಣೆ, ಬಸ್ ನಿಲ್ದಾಣ, ಆಸ್ಪತ್ರೆ, ಶಾಲೆ, ಮಾರುಕಟ್ಟೆ ಹಾಗೂ ಇತರ ಸಾರ್ವಜನಿಕ ಸೇವೆಗಳ ಮಟ್ಟವನ್ನು ಸುಧಾರಿಸುವ ಕಾರ್ಯವನ್ನು ನಗರಸಭೆ ಮೂಲಕ ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಗೋವಾದಲ್ಲಿ ಗಡಿ ಕನ್ನಡ ಭವನ ನಿರ್ಮಾಣಕ್ಕಾಗಿ ಖಾಸಗಿ ನಿವೇಶನ ಖರೀದಿ
ಸ್ಥಳೀಯ ಪ್ರತಿಕ್ರಿಯೆಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಾಗರಿಕ ಸಂಘಟನೆಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಭಟ್ಕಳ ಬಹು ಆಯಾಮಿಕವಾಗಿ ಬೆಳೆಯುತ್ತಿದೆ. ಈ ನಿರ್ಧಾರದಿಂದ ನಗರಾಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂದು ಸಚಿವಮಂಕಾಳ ವೈದ್ಯ ಆಶಯ ವ್ಯಕ್ತಪಡಿಸಿದ್ದಾರೆ.