ವಿಜಯನಗರ ಕೃಷ್ಣದೇವರಾಯ ವಿವಿಯ ಕುಲಪತಿಯಾಗಿ ಪ್ರೊ. ಮೇತ್ರಿಯವರನ್ನು ಮಾಡಿದ್ದ ನೇಮಕಾತಿಯನ್ನು ಹೈಕೋರ್ಟ್ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ನೂತನ ಕುಲಪತಿಯಾಗಿ ಡಾ ಎಂ ಮುನಿರಾಜು ಅವರನ್ನು ನೇಮಕ ಮಾಡಲಾಗಿದೆ.
ಬಳ್ಳಾರಿ ಮಹಾನಗರದ ಹೊರ ವಲಯದ ಅಲೀಪುರ ಸಮೀಪದಲ್ಲಿರುವ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿಗೆ ಈ ಹಿಂದೆ ಪ್ರೊ.ಮೇತ್ರಿಯವರನ್ನು ಕುಲಪತಿಯಾಗಿ ನೇಮಕಾತಿ ಮಾಡಲಾಗಿತ್ತು. ಈ ನೇಮಕಾತಿಯ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಜುಲೈ 24, 2024ರಂದು ಪ್ರೊ.ಮೇತ್ರಿಯವರ ನೇಮಕಾತಿ ಆದೇಶವನ್ನು ರದ್ದುಪಡಿಸಿತ್ತು.

ಪ್ರೊ.ಮೇತ್ರಿಯವರ ನೇಮಕಾತಿ ರದ್ದಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಕುಲಪತಿ ಹುದ್ದೆಗೆ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ಮುನಿರಾಜು ಅವರನ್ನು ನೇಮಕಗೊಳಿಸಲಾಗಿದೆ.
ರಾಜ್ಯ ಸರ್ಕಾರದ ಶೋಧ ಸಮಿತಿ ಮೂಲಕ ಅಂತಿಮಗೊಳಿಸಿದ್ದ ಅರ್ಜಿಗಳನ್ನು ಪುನರ್ ಪರಿಶೀಲಿಸಿ, ಪರಿಗಣಿಸಲು ಹೈ ಕೋರ್ಟ್ ಸೂಚಿಸಿದ್ದರಿಂದ, ಮೆರಿಟ್, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ರಾಜ್ಯ ಸರ್ಕಾರದ ಅಭಿಪ್ರಾಯದೊಂದಿಗೆ ಡಾ.ಎಂ.ಮುನಿರಾಜು ಅವರನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಬೆಂಗಳೂರು ವಿವಿಯಲ್ಲಿ ಹಂಗಾಮಿ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದ ಡಾ. ಮುನಿರಾಜು, ಈಗ ಬಳ್ಳಾರಿಯ ನೂತನ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಈ ಆದೇಶದ ದಿನಾಂಕದಿಂದ 4 ವರ್ಷದ ಅವಧಿ ಅಥವಾ 67 ವರ್ಷ ಪೂರೈಸುವ ತನಕ ಬಳ್ಳಾರಿ ವಿವಿ ಕುಲಪತಿಗಳಾಗಿ ಡಾ. ಮುನಿರಾಜು ಸೇವೆ ಸಲ್ಲಿಸಲಿದ್ದಾರೆ. ಕುಲಪತಿಗಳಾಗಿ ಡಾ. ಮುನಿರಾಜು ಇಂದು(ಆಗಸ್ಟ್ 16) ಅಧಿಕಾರ ವಹಿಸಿಕೊಳ್ಳಲಿದ್ದಾರೆ.
