ಭಾರತದಂತಹ ಬಡ ದೇಶವು ಅಭಿವೃದ್ಧಿ ರಾಷ್ಟ್ರವಾಗಲು ಸಹಾನುಭೂತಿಯುಳ್ಳ ಬಂಡವಾಳಶಾಹಿಯ ಅಗತ್ಯವಿದೆ. ಅದೊಂದೇ ಏಕೈಕ ಪರಿಹಾರವಾಗಿದೆ ಎಂದು ಇನ್ಫೋಸಿಸ್ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಶೃಂಗಸಭೆಯಲ್ಲಿ ಅವರು ಮಾತನಾಡಿದರು. “ಯಾವುದನ್ನೂ ಉಚಿತವಾಗಿ ನೀಡಬಾರದು. ಪ್ರತಿಯೊಂದಕ್ಕೂ ಒಂದು ಮೌಲ್ಯವಿದೆ. ಸರ್ಕಾರ ಜನರಿಗೆ ಉಚಿತವಾಗಿ ಸೇವೆಯನ್ನು ಒದಗಿಸಿದರೆ, ಪಡೆದವರು ಏನನ್ನಾದರೂ ಮಾಡಲು ಸಿದ್ಧರಾಗಿರಬೇಕು. ಉಚಿತ ಸಬ್ಸಿಡಿಗಳನ್ನು ಪಡೆದ ಜನರಲ್ಲಿ ದೊಡ್ಡ ಜವಾಬ್ದಾರಿಗಳಿರುತ್ತವೆ. ಉಚಿತ ಸೇವೆ ಪಡೆದವರು ಹಿಂತಿರುಗಿ ಸಮಾಜಕ್ಕೆ ಏನನ್ನಾದರೂ ಕೊಡಬೇಕು” ಎಂದರು.
”ಪ್ರಪಂಚದಲ್ಲಿ ಸಮಾಜವಾದ, ಎಡಪಂಥೀಯ ತತ್ವ ಸಿದ್ಧಾಂತಗಳನ್ನು ನೆಚ್ಚಿಕೊಂಡಿದ್ದ ದೇಶಗಳು ಉತ್ತಮ ಸ್ಥಿತಿಯಲ್ಲಿಲ್ಲ. ಸಮಾಜವಾದಿ ತತ್ವಗಳನ್ನು ನಂಬಿದ್ದ ಸೋವಿಯತ್ ಒಕ್ಕೂಟವೇ ಈಗ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ, ನಮ್ಮ ದೇಶದ ಅಭಿವೃದ್ಧಿಗೆ ಸಹಾನುಭೂತಿಯುಳ್ಳ ಬಂಡವಾಳಶಾಹಿ ವ್ಯವಸ್ಥೆ ಅಗತ್ಯವಿದೆ” ಎಂದರು.
“ಯಾವುದೇ ದೇಶದ ಬಡತನ ಸಮಸ್ಯೆಯನ್ನು ಪರಿಹರಿಸಲು ಮುಕ್ತ ಮಾರುಕಟ್ಟೆ ಮತ್ತು ಉದ್ಯಮಶೀಲತೆಯನ್ನು ಆಧರಿಸಿದ ಬಂಡವಾಳಶಾಹಿ ಒಂದೇ ಪರಿಹಾರವಾಗಿದೆ” ಎಂದು ಹೇಳಿದರು.
ಎನ್‌ಇಪಿಯನ್ನು ಸಮರ್ಥಿಸಿ, ಪ್ರಧಾನಿ ಮೋದಿಯನ್ನು ಹೊಗಳಿದ ನಾರಾಯಣ ಮೂರ್ತಿ, “ವಿದ್ಯಾರ್ಥಿಗಳು ಹೆಚ್ಚು ಸಮರ್ಥರಾಗಲು ಎನ್ಇಪಿ ನೆರವಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ಇಪಿ ಕರಡು ರಚನೆ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರನ್ನು ಅಭಿನಂದಿಸುತ್ತೇನೆ. ಸ್ವತಂತ್ರ ಚಿಂತನೆ, ಕ್ರಿಯಾತ್ಮಕ ಆಲಿಸುವಿಕೆ, ವಿಶ್ಲೇಷಣಾ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಎನ್ಇಪಿ ಸಕಾರಾತ್ಮಕ ಹೆಜ್ಜೆಯಾಗಿದೆ” ಎಂದರು.