ಬೀದರ್ ನಗರದ ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ನಡುವೆ ನಡೆದ ಹೊಡೆದಾಟದಲ್ಲಿ ನಾನಾಗಲಿ, ನನ್ನ ಮಗನಾಗಲಿ ಹಸ್ತಕ್ಷೇಪ ಮಾಡಿಲ್ಲ. ನಮ್ಮ ವಿರುದ್ಧದ ಬಿಜೆಪಿ ಆರೋಪ ಶುದ್ಧ ಸುಳ್ಳು, ರಾಜಕೀಯ ಪ್ರೇರಿತವಾಗಿದೆ ಎಂದು ಸ್ಥಳೀಯ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್ ಸ್ಪಷ್ಟಪಡಿಸಿದ್ದಾರೆ.
‘ಜಿಎನ್‌ಡಿಯಲ್ಲಿ ನಡೆದ ಘಟನೆ ದುರದೃಷ್ಟಕರವಾದುದು. ಅದನ್ನು ನಾನು ಖಂಡಿಸುತ್ತೇನೆ. ಯಾವುದೇ ಧರ್ಮದ ಹೆಸರಿನಲ್ಲಿ ಜಗಳ, ಗಲಾಟೆ, ಹೊಡೆದಾಟ ಮಾಡುವುದು ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಆದರೆ, ಈ ಘಟನೆಗೆ ಸಂಬಂಧಿಸಿ ಬಿಜೆಪಿಯವರು ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ನೀಡಿ ವಿನಾಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಈ ಘಟನೆಗೆ ಸಂಬಂಧಿಸಿದಂತೆ ನಾನು ಯಾರ ಮೇಲೆಯೂ ಒತ್ತಡ ಹೇರಿಲ್ಲ. ನನ್ನ ಮಗ ಇರ್ಷಾದ್ ಖಾನ್ ಎರಡು ವಾರಗಳಿಂದ ಸ್ಥಳೀಯವಾಗಿ ಇಲ್ಲ. ಆದರೆ, ವಿನಾಕಾರಣ ಮಗನ ಬಿಜೆಪಿಯವರು ನನ್ನ ವಿರುದ್ಧ ಮಾಡುತ್ತಿರುವ ಇಲ್ಲ ಸಲ್ಲದ ಆರೋಪಗಳಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ ಎಂದಿದ್ದಾರೆ.
ನಾನೆಂದೂ ಜಾತಿ ರಾಜಕೀಯ ಮಾಡಿಲ್ಲ. ಎಲ್ಲರನ್ನೂ ಗೌರವದಿಂದ ಕಾಣುತ್ತೇನೆ. ಬೀದರ್ ಕ್ಷೇತ್ರದ ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೇ ಸಾಕ್ಷಿ. ಸರ್ವರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯ ಲಾಭ, ಸ್ವಾರ್ಥಕ್ಕಾಗಿ ಸುಳ್ಳು ಹೇಳಿಕೆ ನೀಡಿ ದ್ವೇಷ ಹುಟ್ಟಿಸುವ, ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುವವ ನಾನಲ್ಲ, ಭವಿಷ್ಯದಲ್ಲಿ ಈ ರೀತಿಯ ಘಟನೆಗಳಿಗೆ ಅಸ್ಪದ ಕೊಡಬಾರದು ಎಂದು ತಿಳಿಸಿದ್ದಾರೆ.
“ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರಕ್ಕಾಗಿ ಪೂರ್ವನಿಗದಿಯಂತೆ ನಾನು ಹಾಗೂ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಘಟನೆ ನಡೆದ ದಿನ ಜಿಎನ್‌ಡಿ ಕಾಲೇಜಿಗೆ ಹೋಗಿದ್ದೆವು. ನಾವು ಹೋಗುವ ಎರಡೂರು ಗಂಟೆಗಳ ಮೊದಲೇ ಗಲಾಟೆ ಮುಗಿದಿತ್ತು. ನಾವು ಅಲ್ಲಿಗೆ ಹೋದ ನಂತರವೇ ಘಟನೆ ಬಗ್ಗೆ ತಿಳಿದದ್ದು. ಹಲ್ಲೆ ನಡೆಸಿದವರ ಪರ ನಿಂತಿದ್ದೇವೆ. ಹಲ್ಲೆ ನಡೆಸಿದವರು ಪ್ರಕರಣ ದಾಖಲಿಸಲು ಒತ್ತಡ ಹೇರಿದ್ದೇವೆ ಎಂದು ಬಿಜೆಪಿಯವರು ಕಟ್ಟುಕತೆ ಸೃಷ್ಟಿಸಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
“ಬೀದರ್ ಸೂಫಿ-ಸಂತರ ನಾಡು. ಸೌಹಾರ್ದತೆಗೆ ಹೆಸರಾಗಿದೆ. ಜಿಎನ್‌ಡಿ ಕಾಲೇಜಿನ ಘಟನೆಯನ್ನು ರಾಜಕೀಯ ಸ್ವಾರ್ಥಕ್ಕೆ ಯಾರೂ ಬಳಸಿಕೊಳ್ಳಬಾರದು. ಶಾಂತಿಗೆ ಹೆಸರುವಾಸಿಯಾದ ಬೀದರ್‌ನಲ್ಲಿ ಅಶಾಂತಿ ಸೃಷ್ಟಿಸಲು, ಕೋಮು ಸೌಹಾರ್ದಕ್ಕೆ ಧಕ್ಕೆ ತರಲು ಯಾರೂ ಪ್ರಯತ್ನ ಮಾಡಬಾರದು’ ಎಂದು ಮನವಿ ಮಾಡಿದ್ದಾರೆ.