ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಅನಧಿಕೃತ ಗೋರಿಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಸತ್ಯ ಸತ್ಯತೆಯನ್ನು ತಿಳಿಯದೆ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಜೇವರ್ಗಿಯ ಅಂದೋಲಾ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಆಳಂದ ತಾಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ತಾಲೂಕಿನ ಕಡಗಂಚಿ ಗ್ರಾಮ ಸಮೀಪ ಇರುವ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಅನಧಿಕೃತವಾಗಿ ಮುಸ್ಲಿಮರು ಗೋರಿಗಳನ್ನು ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು, ಯಾವುದೇ ಅನುಮತಿ ಇಲ್ಲದೆ ಸುಮಾರು 10-15 ಅಡಿಯ ಮಜಾರ ನಿರ್ಮಿಸಿ ಅಲ್ಲಿಯೇ ನಮಾಝ್ ಕೂಡ ಮಾಡುತ್ತಿದ್ದಾರೆಂದು ಮಾಹಿತಿ ಬಂದಿದೆ ಎಂದು ಆ.3ರಂದು ಪ್ರಸಾರವಾದ ಕನ್ನಡದ ಮಾಧ್ಯಮವೊಂದಕ್ಕೆ ಶ್ರೀರಾಮ ಸೇನೆಯ ಮುಖ್ಯಸ್ಥರೂ ಆದ ಅಂದೋಲಾ ಶ್ರೀ ಆಧಾರರಹಿತ ಹೇಳಿಕೆ ನೀಡಿದ್ದರು.
ʼಮುಸ್ಲಿಮರು ಮುಂದಿನ ದಿನಗಳಲ್ಲಿ ಅಲ್ಲಿ ಶೆಡ್ ನಿರ್ಮಿಸಿ ನಮಾಝ್ ಮಾಡಲು ಮಸೀದಿ ನಿರ್ಮಿಸುವ ಷಡ್ಯಂತ್ರ ನಡೆದಿದೆ. ಕೂಡಲೇ ಇಲ್ಲಿಯ ಜಿಲ್ಲಾಡಳಿತವು ಎಚ್ಚೆತ್ತುಕೊಂಡು ಮಜಾರ ನೆಲಸಮ ಮಾಡಬೇಕು. ಇಲ್ಲದಿದ್ದರೆ ಆಗಸ್ಟ್ 10ರಂದು ಶ್ರೀರಾಮ ಸೇನೆಯಿಂದ ಅನಧಿಕೃತವಾಗಿರುವ ಗೋರಿಯನ್ನು ನೆಲಸಮ ಮಾಡುತ್ತೇವೆʼ ಎಂದು ಅಂದೋಲಾ ಶ್ರೀ ಅವರು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದರು.
ಈ ಸಂಬಂಧ ನರೋಣಾ ಠಾಣೆಯ ಸಿಬ್ಬಂದಿ ಆ.4ರಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು. ಈ ವಿಶ್ವವಿದ್ಯಾಲಯ 654 ಎಕರೆಯಲ್ಲಿ ನಿರ್ಮಾಣವಾಗಿದ್ದು, ಈ ವಿವಿ ಆವರಣದಲ್ಲಿ ನೂರಾರು ವರ್ಷಗಳ ಹಿಂದಿನ ಮಜಾರ, ಗೊರಿಗಳಿವೆ. ಈ ಜಾಗದಲ್ಲಿ ಯಾವುದೇ ಹೊಸ ಕಟ್ಟಡ, ಮಜಾರ, ಗೋರಿ ಕಟ್ಟಿದ್ದು ಕಂಡು ಬಂದಿಲ್ಲ. ಆದರೆ, ಸಿದ್ದಲಿಂಗ ಸ್ವಾಮೀಜಿ ಅವರು ಯಾವುದೇ ಸತ್ಯ ಸತ್ಯತೆಯನ್ನು ತಿಳಿದುಕೊಳ್ಳದೆ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಾಗೂ ಎರಡು ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ಕೋಮು ಗಲಭೆ ಮಾಡುವ ಉದ್ದೇಶದಿಂದ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಜೀವಂತ ತಂದೆಗೆ ಶ್ರದ್ಧಾಂಜಲಿ ಏರ್ಪಡಿಸಿದ್ದ ಪುತ್ರ; ಸುದ್ದಿ ತಿಳಿದು ಗ್ರಾಮಕ್ಕೆ ಓಡಿಬಂದ ತಂದೆ
ಸಿದ್ಧಲಿಂಗ ಸ್ವಾಮೀಜಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ನೂರಾರು ವರ್ಷಗಳ ಹಿಂದಿನ ಮಜಾರ, ಗೋರಿಗಳನ್ನು ಧ್ವಂಸಗೊಳಿಸಲಾಗುವುದು ಎಂದು ಮುಸ್ಲಿಂ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿ ಮತೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ನರೋಣಾ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ 162/2025 ಕಲಂ, 192, 196, 299, 302 ಬಿಎನ್‌ಎಸ್ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.