ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಲ್ಲಿ ಮಾಜಿ ಸಚಿವ, ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಈ ಸಂಬಂಧ ಬೀದರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ಅವರು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಔರಾದ್‌ನ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಹೀಗಾಗಿ ಆಯೋಗಕ್ಕೆ ದೂರು ನೀಡಿರುವುದಾಗಿ ಯುವತಿ ತಿಳಿಸಿದ್ದರು.
ಇದನ್ನು ಓದಿದ್ದೀರಾ? ಮದುವೆಯಾಗುವುದಾಗಿ ನಂಬಿಸಿ ಮೋಸ : ಬಿಜೆಪಿ ಶಾಸಕ ಪ್ರಭು ಚವ್ಹಾಣ ಪುತ್ರನ ವಿರುದ್ಧ ದೂರು; ಇದು ರಾಜಕೀಯ ಷಡ್ಯಂತ್ರ ಎಂದ ಚವ್ಹಾಣ
ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಲೈಂಗಿಕವಾಗಿಯೂ ಬಳಸಿಕೊಂಡು ಮೋಸ ಮಾಡಿದ್ದಾನೆಂದು ಯುವತಿ ಪ್ರತೀಕ್ ಚೌಹಾಣ್ ವಿರುದ್ಧ ಆರೋಪಿಸಿದ್ದು, ನ್ಯಾಯ ಒದಗಿಸುವಂತೆ ಸಂತ್ರಸ್ತ ಯುವತಿ ಮನವಿ ಮಾಡಿದ್ದರು. ಈ ಸಂಬಂಧ ಬೀದರ್‌ನಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ತಮ್ಮ ಪುತ್ರನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ಸುಳ್ಳು ಆರೋಪ ಎಂದಿರುವ ಪ್ರಭು ಚೌಹಾಣ್, ದೂರುದಾರ ಯುವತಿಯ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬೀದರ್ | ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಅತ್ಯಾಚಾರ ಆರೋಪ; ಯುವತಿ ವಿರುದ್ಧವೇ ಪ್ರತ್ಯಾರೋಪ ಮಾಡಿದ ಶಾಸಕ
“ದೂರು ನೀಡಿರುವ ಯುವತಿ ಬೇರೆಯೊಬ್ಬರ ಜೊತೆ ಮೆಸೇಜ್, ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಳು. ಹೀಗೆ ಮಾಡುವ ಯುವತಿಯ ಜೊತೆ ಮಗ ಹೇಗೆ ಮದುವೆಯಾಗಲು ಸಾಧ್ಯ? ನಿಶ್ಚಿತಾರ್ಥವಾದ ದಿನದಿಂದಲೂ ಯುವತಿಗೆ ಬುದ್ಧಿವಾದ ಹೇಳಿದ್ದೇವೆ. ಹುಡುಗಿಯ ಸೋದರ ಮಾವನನ್ನು ಕರೆದು ಆಕೆಗೆ ಬುದ್ದಿ ಹೇಳುವಂತೆ ಸೂಚಿಸಿದ್ದೇವೆ. ಆದರೆ, ಆಕೆ ತನ್ನ ನಡೆತೆಯನ್ನು ಬದಲಿಸಿಕೊಂಡಿಲ್ಲ” ಎಂದು ಯುವತಿ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ.
“ನನ್ನ ಕುಟುಂಬದ ಹೆಸರು ಕೆಡಿಸಲು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರ ಗ್ಯಾಂಗ್ ಕೆಲಸ ಮಾಡುತ್ತಿದೆ. ನಾವು ಏನೇ ಮಾಡಿದರೂ, ಆ ಗ್ಯಾಂಗ್ ಅಡ್ಡಿಪಡಿಸುತ್ತದೆ. 2014ರಿಂದಲೂ ಆ ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿದೆ. ಈಗ ದೂರುದಾರ ಯುವತಿಯನ್ನು ಕರೆದೊಯ್ದು ಮಹಿಳಾ ಆಯೋಗಕ್ಕೆ ದೂರು ಕೊಡಿಸಿದೆ. ನನ್ನ ಮಗ, ಸೊಸೆ ಹಾಗೂ ಅವರ ಸಹೋದರಿ ಶಿರಡಿಗೆ ಹೋಗಿದ್ದಾರೆ. ನನ್ನ ಮಗ ಯಾವುದೇ ಉಲ್ಟಾಪಲ್ಟಾ ಕೆಲಸ ಮಾಡಿಲ್ಲ. ಬೇಕಿದ್ದರೆ ವೈದ್ಯಕೀಯ ತಪಾಸಣೆ ಮಾಡಿಸಲಿ” ಎಂದಿದ್ದಾರೆ.
