ಧರ್ಮಸ್ಥಳ ಸರಣಿ ಅತ್ಯಾಚಾರ ಕೊಲೆಗಳ ಸಾಕ್ಷಿ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಯವರಿಗೆ ದೂರನ್ನು ಸಲ್ಲಿಸಿದ್ದಾರೆ. ಈ ಹಿಂದೆಯೇ ಹಲವು ಅಪರಾಧ ಕೃತ್ಯಗಳು ನಡೆದಿದೆ. ಜೀವ ಬೆದರಿಕೆಯಿಂದ ತಾನೂ ಮೃತದೇಹಗಳ ವಿಲೇವಾರಿ ಮಾಡಿದ್ದೆ. ಆದರೆ ಈಗ ಪಾಪಪ್ರಜ್ಞೆ ಕಾಡುತ್ತಿದೆ. ಕಾನೂನು ರಕ್ಷಣೆ ದೊರೆತರೆ ವಿಲೇವಾರಿ ಮಾಡಿದ ಮೃತದೇಹಗಳನ್ನು ತೋರಿಸುವುದಾಗಿ ವ್ಯಕ್ತಿ ಹೇಳಿದ್ದರು.
ಇದನ್ನು ಓದಿದ್ದೀರಾ? ಧರ್ಮಸ್ಥಳದಲ್ಲಿ ನಡೆದ ಸರಣಿ ಅತ್ಯಾಚಾರ ಕೊಲೆಗಳ ಸಾಕ್ಷಿ ನಾಶ ಪ್ರಕರಣ: ಎಫ್‌ಐಆರ್ ದಾಖಲು
ಈ ದೂರನ್ನು ಪರಿಗಣಿಸಿದ ಧರ್ಮಸ್ಥಳ ಪೊಲೀಸರು ಸರಣಿ ಅತ್ಯಾಚಾರ ಕೊಲೆಗಳ ಸಾಕ್ಷಿ ನಾಶಕ್ಕೆ ಸಂಬಂಧಿಸಿದ BNS 211ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್‌ಐಆರ್ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾ ಎಸ್‌ಪಿ ಡಾ. ಅರುಣ್ ಕುಮಾರ್, “ಪ್ರಕರಣ ದಾಖಲಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗುರುವಾರ ತನ್ನ ಕಚೇರಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ವ್ಯಕ್ತಿ ದೂರು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
“ದೂರುದಾರರು ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿಡುವಂತೆ ಮನವಿ ಮಾಡಿದ್ದಾರೆ. ಅದರಿಂದಾಗಿ ಅವರ ಮಾಹಿತಿಗಳನ್ನು ನೀಡಲಾಗುವುದಿಲ್ಲ” ಎಂದು ಎಸ್‌ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
