ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತರವರೂರು ಸಿದ್ದರಾಮಯ್ಯಹುಂಡಿ ಬಳಿಯ ಶ್ರೀನಿವಾಸಪುರ ಗ್ರಾಮದಲ್ಲಿ ದಲಿತ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ, ಪ್ರಬಲ ಜಾತಿಯವರು ಜಾತಿ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ.
ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶ್ರೀನಿವಾಸಪುರದಲ್ಲಿ ದಲಿತ ಸಮುದಾಯದ ಸುರೇಶ್ ಎಂಬವರ ಕುಟುಂಬಕ್ಕೆ ಗ್ರಾಮದ ಪ್ರಬಲ ಜಾತಿ ಮುಖಂಡರಾದ ಚಿಕ್ಕಂಡಯ್ಯ, ಬಸವಯ್ಯ, ಮೋಟ ಮಹದೇವಯ್ಯ ಹಾಗೂ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮಹದೇವ್ ಎಂಬವರು ಗ್ರಾಮದೊಳಗೆ ಪಂಚಾಯತಿ ನಡೆಸಿ ಬಹಿಷ್ಕಾರ ಹಾಕಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ರಂಗನಾಥಪುರ ಗ್ರಾಮದ ಪ್ರಮೋದ್ ಮತ್ತು ಸುರೇಶ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ, ಪ್ರಮೋದ್ ಮತ್ತು ಆತನ ಸಹಚರರು ಸುರೇಶ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅವರ ಮನೆಯ ಬೆಲೆ ಬಾಳುವ ವಸ್ತುಗಳನ್ನು ಧ್ವಂಸ ಮಾಡಿದ್ದರು. ಗಲಾಟೆ ವಿಚಾರವಾಗಿ ಗ್ರಾಮದೊಳಗೆ ಮುಖಂಡರು ಪಂಚಾಯತಿ ನಡೆಸಿ, ಇಬ್ಬರಿಗೂ ದಂಡ ವಿಧಿಸಿದ್ದರು. ಪ್ರಮೋದ್‌ಗೆ 25,000 ರೂ. ಮತ್ತು ಸುರೇಶ್ಗೆ 15,000 ರೂ. ದಂಡ ವಿಧಿಸಲಾಗಿತ್ತು.
ಆದರೆ, ತಮ್ಮ ಮನೆಗೆ ಮೇಲೆ ದಾಳಿ ಮಾಡಿ, ಹಲವಾರು ವಸ್ತುಗಳನ್ನು ಧ್ವಂಸ ಮಾಡಿದ್ದ ಪ್ರಮೋದ್‌ಗೆ ಹೆಚ್ಚಿನ ದಂಡ ವಿಧಿಸದೆ, ತಮಗೂ ದಂಡ ವಿಧಿಸಿದ್ದ ಗ್ರಾಮದ ಮುಖಂಡರ ನಡೆಯನ್ನು ಸುರೇಶ್ ಖಂಡಿಸಿದ್ದರು. ತಮಗೆ ಅನ್ಯಾಯವಾಗಿದೆ. ನಾವು ದಂಡ ಪಾವತಿಸುವುದಿಲ್ಲ ಎಂದು ಸುರೇಶ್ ಹೇಳಿದ್ದರು.
ಈ ವರದಿ ಓದಿದ್ದೀರಾ?: ಕೆಪಿಎಸ್‌ಸಿ ಕರ್ಮಕಾಂಡ | ಮರುಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೂ ಎಡವಟ್ಟು: ಬೇಜವಾಬ್ದಾರಿ ಅಧಿಕಾರಿಗಳ ತಲೆದಂಡವೇ ಸೂಕ್ತ ಕ್ರಮ?
ದಲಿತ ಸಮುದಾಯದ ಸುರೇಶ್ ಅವರು ನ್ಯಾಯ ಕೇಳಿದ್ದನ್ನು ಗ್ರಾಮದ ಪ್ರಬಲ ಜಾತಿಯ ಮುಖಂಡರಿಗೆ ಸಹಿಸಲಾಗಿಲ್ಲ. ಸುರೇಶ್ ಅವರ ವಾದದಿಂದ ಮುಜುಗರಕ್ಕೀಡಾಗಿ, ಕೆರಳಿದ ಮುಖಂಡರು, ಸುರೇಶ್ ತಪ್ಪು ಕಾಣಿಕೆ ಕಟ್ಟುವರೆಗೆ ಅವರ ಕುಟುಂಬವನ್ನು ಯಾರೂ ಒಳಗೊಳ್ಳುವಂತಿಲ್ಲ ಎಂದು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ತಮಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದರ ಬಗ್ಗೆ ಸುರೇಶ್ ಮೈಸೂರು ಜಿಲ್ಲಾಧಿಕಾರಿ, ಪೊಲೀಸರು, ತಹಶೀಲ್ದಾರ್ಗೆ ದೂರು ನೀಡಿದ್ದಾರೆ. ಆದರೂ, ಅವರಿಗೆ ಈವರೆಗೆ ನ್ಯಾಯ ದೊರೆತಿಲ್ಲ. ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ವರದಿಯಾಗಿದೆ.