ಒಳಮೀಸಲಾತಿ ಶೈಕ್ಷಣಿಕ ಸಮೀಕ್ಷೆ ಸೋಮವಾರದಿಂದ ನಡೆಯಲಿದೆ. ರಾಜ್ಯದಲ್ಲಿರುವ ಛಲವಾದಿ ಸಮುದಾಯಕ್ಕೆ ಈ ಸಮೀಕ್ಷೆ ಬಹಳ ಮುಖ್ಯವಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಸಮುದಾಯ ಬಾಂಧವರು ಸಮೀಕ್ಷೆಗೆ ಬಂದಾಗ ಹೊಲೆಯ ಅಥವಾ ಹೊಲೆಯರು ಎಂದು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ರಾಜ್ಯ ಸಂಚಾಲಕ ಕೈವಾರ ಮಂಜುನಾಥ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯದವರನ್ನು ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಕರೆಯಲಾಗುತ್ತಿದೆ. ಇದನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಸರಕಾರ ನಾಗಮೋಹನ್ ದಾಸ್ ಅವರ ಆಯೋಗವನ್ನು ರಚನೆ ಮಾಡಿದೆ. ಅದಕ್ಕಾಗಿ ಛಲವಾದಿ ಮಹಾಸಭಾದ ಮುಖಂಡರು ಮನೆ ಮನೆಗೆ ತೆರಳಿ ಸಮುದಾಯದ ಹೆಸರುಗಳನ್ನು ಸ್ಪಷ್ಟವಾಗಿ ಬರೆಸಬೇಕು ಎಂದು ಮನವಿ ಮಾಡಿದರು.
ಎಕೆ, ಎಡಿ ಎಂಬ ಜಾತಿಯನ್ನು ಬರೆಸಬಾರದು. ನಮ್ಮ ಸಮುದಾಯದವರು ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದರೆ, ಬೌದ್ಧ ಎಂದು ಬರೆಸಬೇಡಿ. ಬದಲಾಗಿ ತಮ್ಮ ಮೂಲ ಜಾತಿಯಾದ ಹೊಲೆಯ ಅಥವಾ ಹೊಲೆಯರು ಎಂದೇ ಬರೆಸಿ.
ಈ ಸಮೀಕ್ಷೆ ಬಹಳ ಕಟ್ಟುನಿಟ್ಟಿನ ಸಮೀಕ್ಷೆಯಾಗಿದ್ದು, ಇದರಿಂದ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ. ಎಲ್ಲರೂ ಹೊಲೆಯ ಅಥವಾ ಬ್ರಾಕೆಟ್‌ನಲ್ಲಿ ಛಲವಾದಿ ಎಂದು ಬರೆಸಬೇಕು ಎಂದು ಹೇಳಿದರು.
ಮೈಸೂರು ಭಾಗದಲ್ಲಿ ಎಕೆ, ಎಡಿ ಸಾಮಾನ್ಯವಾಗಿ ಬರಸುತ್ತಿರುವ ಜಾತಿ. ಆದರೆ ಅದು ಜಾತಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮುದಾಯದ ಮುಖಂಡರು ಸಭೆ ನಡೆಸಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
ಮತ್ತೊಬ್ಬ ಮುಖಂಡ ಮಾತನಾಡಿ, ಮೇ 5ರಂದು ಜಾತಿ ಗಣತಿ ನಡೆಯಲಿದ್ದು, ಅವರವರ ಗ್ರಾಮದಲ್ಲೂ ಶಿಕ್ಷಿತರು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದರಿಂದ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಮುದಾಯದ ಬೆಳವಣಿಗೆ ಸಾಧ್ಯ ಆಗಲಿದೆ ಎಂದು ಹೇಳಿದರು.
ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಸಮುದಾಯದ ಕುರಿತು ಸಾಕಷ್ಟು ಗೊಂದಲ ಇದೆ. ಆದ್ದರಿಂದ ಹೊಲೆಯ ಅಥವಾ ಹೊಲೆಯರು ಎಂದು ಖಡ್ಡಾಯವಾಗಿ ಬರೆಸಬೇಕು ಎಂದು ಹೇಳಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಜಾತಿ ಜನಗಣತಿ; ಕಾಲಂ 61ರಲ್ಲಿ ಮಾದಿಗ ಎಂದು ನಮೂದಿಸಿ; ಸಿದ್ದರಾಜು ಸ್ವಾಮೀಜಿ
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಆಯೋಗಗಳು ಕೊಟ್ಟಿರುವ ವರದಿ ಅವೈಜ್ಞಾನಿಕ ಆಗಿದೆ. ಹಾಗಾಗಿ ಸರಕಾರಕ್ಕೆ ನಾವು ಮನವಿ ಕೊಟ್ಟಿದ್ದೆವು. ಸರಕಾರ ನಮ್ಮ ಮನವಿಯನ್ನು ಪರಿಗಣಿಸಿ ಇದೀಗ ಮತ್ತೆ ಮರುಸಮೀಕ್ಷೆಗೆ ಆದೇಶ ಹೊರಡಿಸಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ ಸರಿಯಾದ ಜಾತಿ ಬರೆಸಬೇಕು ಎಂದು ಮನವಿ ಮಾಡಿದರು.
ಛಲವಾದಿ ಮಹಾಸಭಾದ ಕೃಷ್ಣಪ್ಪ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್, ನಾರಾಯಣಸ್ವಾಮಿ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.