ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯು ಇಂದಿನಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ ಅವರಿಗೆ ಸ್ಪಷ್ಟ ದತ್ತಾಂಶ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬೆಂ.ಗ್ರಾಮಾಮತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ದಲಿತಪರ, ಪ್ರಗತಿಪರ ಸಂಘಟನೆ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನುವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಗಳನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯನ್ನು ನಡೆಸುತ್ತಿದೆ. ಹಾಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ತಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್ ನಂಬರ್ ನೊಂದಿಗೆ ಅವರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟ ದತ್ತಾಂಶ ನೀಡಬೇಕು. ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಸೇರಿದಂತೆ ಉಪಜಾತಿಗಳ ವೈಜ್ಞಾನಿಕ ಮಾಹಿತಿ ತಿಳಿಯಬೇಕಿದೆ. 101 ಪರಿಶಿಷ್ಠ ಜಾತಿಗಳಲ್ಲಿ ಒಳ ಮೀಸಲಾತಿ ಕೊಡುವಾಗ ನಿರ್ದಿಷ್ಟ ಅಂಕಿ ಅಂಶಗಳು ಬೇಕಾಗುತ್ತವೆ ಎಂದರು.
ಮೂರು ಹಂತದಲ್ಲಿ ವೈಜ್ಞಾನಿಕ ಸಮೀಕ್ಷೆ:
ಗಣತಿದಾರರು ಇವತ್ತಿನಿಂದ 17ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುವರು. ಜಿಲ್ಲೆಯಲ್ಲಿ ಸಮೀಕ್ಷೆಗಾಗಿಯೇ 1141 ಶಿಕ್ಷಕರನ್ನು ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರುತ್ತಾರೆ. ಎಲ್ಲ ಗಣತಿದಾರರಿಗೆ ತರಬೇತಿಯನ್ನು ನೀಡಲಾಗಿದೆ. ಎರಡನೇ ಹಂತದಲ್ಲಿ ಮೇ 19 ರಿಂದ 21 ರವರೆಗೆ ವಿಶೇಷ ಶಿಬಿರಗಳಲ್ಲಿ ಮತಗಟ್ಟೆವಾರು ಸಮೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಯಾರಾದರೂ ಬಿಟ್ಟು ಹೋಗಿದ್ದರೆ ಶಿಬಿರಕ್ಕೆ ಬಂದು ಸೇರಿಸಬಹುದು. ಮೂರನೇ ಹಂತದಲ್ಲಿ ಮೇ 19 ರಿಂದ 22 ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಮೊಬೈಲ್ ಆಪ್ ಮೂಲಕ ಸಮೀಕ್ಷೆ:
ಮೊಬೈಲ್ ಆಪ್ ಮೂಲಕ ಆನ್ಲೈನ್ ಸಮೀಕ್ಷೆ ನಡೆಸಲಾಗುವುದು. ಗಣತಿದಾರರು ಬೆಳಗ್ಗೆ 6:30 ರಿಂದ ಸಂಜೆ 6:30 ರವರೆಗೆ ಸಮೀಕ್ಷೆ ನಡೆಸುವರು. ಆ ಸಂದರ್ಭದಲ್ಲಿ ಮಾತ್ರ ಮೊಬೈಲ್ ಆಪ್ ಗೆ ಲಾಗಿನ್ ಸಿಗಲಿದೆ. ಆದ್ದರಿಂದ ದತ್ತಾಂಶ ಸಂಗ್ರಹ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಎಲ್ಲರೂ ಪೂರ್ಣವಾಗಿ ತೊಡಗಿಸಿಕೊಂಡು ಗಣತಿದಾರರು ಕೇಳುವಂತಹ ದತ್ತಾಂಶಕ್ಕೆ ಸ್ಪಷ್ಟ ಮಾಹಿತಿ ಕೊಡಿ. ಸಮೀಕ್ಷೆಯಲ್ಲಿ ಸಂಘಟನೆಗಳ ಪಾತ್ರ ಬಹಳ ಮುಖ್ಯವಾಗಿದ್ದು, ಆಯಾ ಪ್ರಾಂತ್ಯದ, ವಾರ್ಡ್ ಗಳಲ್ಲಿ ಪ.ಜಾತಿ ಜನರಿಗೆ ಸಮೀಕ್ಷೆ ಬಗ್ಗೆ ವಿವರಿಸಿ ಗಣತಿದಾರರು ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಸಮೀಕ್ಷೆಗೆ ಸ್ಪಷ್ಟ ಮಾಹಿತಿ ನೀಡಲು ಸಂಘಟನೆಗಳ ಮುಖಂಡರನ್ನು ಕೋರಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ ಮಾತನಾಡಿ, ಸಮೀಕ್ಷೆಯಲ್ಲಿ ಮನೆ, ಕಾರು, ಬೈಕ್, ಜಮೀನು, ಉದ್ಯೋಗದ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದಿಂದ ಸಿಗುವ ಸೌಲಭ್ಯ ನಿಲ್ಲಿಸುತ್ತಾರೆ ಎನ್ನುವ ತಪ್ಪು ತಿಳುವಳಿಕೆ ಇದೆ. ಸಮೀಕ್ಷೆಗೆ ಮಾಹಿತಿ ನೀಡುವುದರಿಂದ ಯಾವುದೇ ರೀತಿಯ ಸೌಲಭ್ಯ ಕಡಿತಗೊಳಿಸುವುದಿಲ್ಲ. ಹಾಗಾಗಿ ಯಾವುದೇ ಗೊಂದಲಕ್ಕೆ ಈಡಾಗದೆ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಿ ಎಂದರು. ಈ ಒಳ ಮೀಸಲಾತಿ ಸಮೀಕ್ಷೆಯು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅಭಿವೃದ್ಧಿಗೆ ಮುನ್ನುಡಿ ಆಗಿದ್ದು, ಇದೊಂದು ಮಹತ್ವದ್ದಾಗಿದೆ. ಜಿಲ್ಲೆಯ ನಾಲ್ಕು ತಾಲ್ಲೂಕಿನ ಸಾರ್ವಜನಿಕರು, ಮುಖಂಡರು, ಸಂಘಟನೆಗಳು ಸಹಕಾರ ನೀಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಹಾಯವಾಣಿ ಸಂಪರ್ಕಿಸಿ:
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ:9482300400 ಹಾಗೂ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ ವಿಚಾರಣಾ ಆಯೋಗ ಸಹಾಯವಾಣಿ ಸಂಖ್ಯೆಯನ್ನು :9481359000 ಸಂಪರ್ಕಿಸಬಹುದಾಗಿದೆ.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜನಪ್ಪ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.