ತಮಿಳು ನಟ ಸಿದ್ಧಾರ್ಥ್ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಅಡ್ಡಿ ಪಡಿಸಿದ್ದನ್ನು ನಟ ಶಿವರಾಜ್‌ಕುಮಾರ್ ಖಂಡಿಸಿದ್ದಾರೆ. ಘಟನೆ ಸಂಬಂಧ ನಟ ಸಿದ್ಧಾರ್ಥ್ ಬಳಿ ಕ್ಷಮೆ ಕೇಳಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವರಾಜ್‌ಕುಮಾರ್ ಭಾಗವಹಿಸಿ ಮಾತನಾಡಿದರು. “ಕಾವೇರಿ ಸಮಸ್ಯೆ ಈ ಹಿಂದೆ ಇಂದಲೂ ಇದೆ. ಇದಕ್ಕೆ ಒಬ್ಬರು ಮತ್ತೊಬ್ಬರನ್ನು ದೂರುವುದರಿಂದ ಪರಿಹಾರ ಸಿಗುವುದಿಲ್ಲ. ಎರಡೂ ರಾಜ್ಯದವರೂ ಕೂತು ಸಮಸ್ಯೆ ಬಗೆಹರಿಸಲು ಮಾರ್ಗಗಳನ್ನು ರೂಪಿಸಬೇಕು. ಶಾಸ್ವತ ಪರಿಹಾರ ಕಂಡುಕೊಳ್ಳಬೇಕು” ಎಂದರು.
“ಕಾವೇರಿ ತಾಯಿಗೂ ನೋವಾಗಿದೆ. ಆಕೆ ಇಲ್ಲಿಯೂ ಇರಬೇಕು, ಅಲ್ಲಿಯೂ ಹೋಗಬೇಕು. ನೀರಿಲ್ಲ ಅಂದ್ರೆ ಅಳಬೇಕು” ಎಂದರು.
“ಸಮಸ್ಯೆ ಅಂತ ಬಂದಾಗ ಕಲಾವಿದರು ಬರಲ್ಲ ಅಂತೀರಿ. ಸಿನಿಮಾದವರು ಬಂದು 5 ನಿಮಿಷ ಮಾತಾಡಿದ್ರೆ ಸಮಸ್ಯೆ ಬಗೆಹರಿಯುತ್ತಾ? ನಾವು ಮನುಷ್ಯರು. ಪ್ರತಿಭಟನೆಗೆ ಒಬ್ಬ ಕಲಾವಿದ ಭಾಗವಹಿಸಿದರೂ, ಇಡೀ ಚಿತ್ರರಂಗವೇ ಭಾಗವಹಿಸಿದಂತೆ ನಾವೆಲ್ಲರೂ ಒಂದೇ. ಅವರು ಬಂದಿಲ್ಲ. ಇವರು ಬಂದಿಲ್ಲ ಅಂತ ದೂರುವುದು ಸರಿಯಲ್ಲ” ಎಂದರು.
“ಬೇರೆ ಭಾಷೆಯ ನಟರು ಸುದ್ದಿಗೋಷ್ಠಿ ನಡೆಸುವಾಗ ಯಾರು ನಿಲ್ಲಿಸಿದ್ದಾರೆ ಅಂತ ಗೊತ್ತಿಲ್ಲ. ಆದರೆ ಆ ರೀತಿ ಮಾಡಿರೋದು ತಪ್ಪು. ಸಮಸ್ಯೆಯನ್ನು ನಾವು ಎದುರಿಸಬೇಕು. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಿದ್ದಾರ್ಥ್ ಅವರಿಗೆ ನಮ್ಮಿಂದ ಬೇಸರ ಆಗಿದೆ. ಕನ್ನಡ ಚಿತ್ರರಂಗದ ಪರವಾಗಿ ಅವರಿಗೆ ನಾವು ಕ್ಷಮೆ ಕೇಳುತ್ತೇವೆ. ಈ ಘಟನೆಯಿಂದ ನಿಜಕ್ಕೂ ನಮಗೂ ನೋವಾಗಿದೆ” ಎಂದು ಹೇಳಿದರು.