ಕಾವೇರಿ ಜಲ ವಿವಾದದ ಹಿನ್ನಲೆಯಲ್ಲಿ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‌ಗೆ ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಎಫ್‌ಐಟಿಯು) ನೈತಿಕ ಬೆಂಬಲ ನೀಡಲಿದೆ ಎಂದು ಸಂಘಟನೆಯ ಬೆಂಗಳೂರು ನಗರದ ಉಸ್ತುವಾರಿ ಅಬ್ದುಲ್ ರಹಿಮಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸುಪ್ರಿಂ ಕೋರ್ಟಿನ ತೀರ್ಮಾನವನ್ನು ರಾಜ್ಯ ಸರ್ಕಾರ ಪಾಲಿಸಬೇಕಾದದ್ದು ನ್ಯಾಯವಾಗಿದೆ. ಆದರೆ ರಾಜ್ಯದಲ್ಲಿ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಬಹಳಷ್ಟು ತಲೆದೋರಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಸುಪ್ರಿಂ ಕೋರ್ಟಿನ ಆದೇಶದಂತೆ ನೀರು ಹರಿಸಿದರೆ ರಾಜ್ಯದಲ್ಲಿ ಇನ್ನಷ್ಟು ಬರಗಾಲ ಸಂಭವಿಸುವುದು ನಿಶ್ಚಿತ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಹಲವಾರು ಜಿಲ್ಲೆಗಳನ್ನು ಈಗಾಗಲೇ ತೀವ್ರ ಬರಗಾಲ ಪೀಡಿತ ಜಿಲ್ಲೆಗಳು ಎಂದು ಘೋಷಣೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕದ ಸ್ಥಿತಿ ‘ಗಾಯದ ಮೇಲೆ ಬರೆ’ ಎಂಬಂತೆ ಆಗಬಹುದು. ಆದ್ದರಿಂದ ಸುಪ್ರಿಂ ಕೋರ್ಟ್‌ಗೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಇನ್ನಷ್ಟು ಮನವರಿಕೆ ಮಾಡಿಸುವ ಪ್ರಯತ್ನ ಮಾಡಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಕರವೇ ಆಗ್ರಹ
“ಮೇಲ್ನೋಟಕ್ಕೆ ರಾಜ್ಯ ಸರಕಾರವು ಸರಿಯಾದ ರೀತಿಯಲ್ಲಿ, ಬೇಕಾದ ಕ್ರಮದಲ್ಲಿ ಸುಪ್ರಿಂ ಕೋರ್ಟಿಗೆ ಮನವರಿಕೆ ಮಾಡುವುದರಲ್ಲಿ ವಿಫಲವಾಗಿದೆ ಎಂದು ಕಾಣುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಂದ್ ಹಿಂಸಾತ್ಮಕ ರೀತಿಯಲ್ಲಿಯೊ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿಯೋ ನಡೆಯಬಾರದು” ಎಂದು ಹೇಳಿದ್ದಾರೆ.