ಕಾವೇರಿ ಹೋರಾಟಕ್ಕೆ ಚಿತ್ರರಂಗದ ನಟರು ಬೆಂಬಲ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೋರಾಟವನ್ನು ಬೆಂಬಲಿಸಿದ್ದಾರೆ. ಹೋರಾಟಗಳು ಬೀದಿಯಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ನಡೆಯಬೇಕು ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ, ನಟರು ಬರೀ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಸುಮ್ಮನಾಗಿದ್ದಾರೆ. ಹೋರಾಟಕ್ಕೆ ಯಾಕೆ ಬಂದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. “ಹೋರಾಟ ಎಲ್ಲಡೆ ನಡೆಯಬೇಕು. ಸಾಮಾಜಿಕ ಜಾಲತಾಣದಲ್ಲೂ ನಡೆಯಬೇಕು. ಈಗ ಸೋಷಿಯಲ್ ಮೀಡಿಯಾದಲ್ಲಿ ಬೆಂಬಲ ನೀಡಿ ಪೋಸ್ಟ್ ಹಾಕಿದ್ದಾರೆ. ಮುಂದೆ, ಹೋರಾಟದಲ್ಲೂ ಭಾಗಿಯಾಗುತ್ತಾರೆ ಎಂಬ ವಿಶ್ವಾಸವಿದೆ” ಎಂದರು.
“ಫಿಲ್ಮ್ ಚೇಂಬರ್‌ನಿಂದ ‘ಒಂದು ವೇದಿಕೆ ಸೃಷ್ಟಿ ಮಾಡುತ್ತೇವೆ. ಚಿತ್ರನಟರು ಭಾಗಿಯಾಗಲಿದ್ದಾರೆ. ಕಾವೇರಿ ನೀರು ಹಳೇ ಸಮಸ್ಯೆ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ನೀರಿನ ಸಮಸ್ಯೆಯಿಂದ ರೈತರಿಗೆ ಮಾತ್ರವಲ್ಲ. ಮುಂದೆ, ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ” ಎಂದು ಹೇಳಿದರು.