ಮೈಸೂರು ರಾಜ್ಯ ಕರ್ನಾಟಕವಾಗಿ ಇಂದಿನ 50 ವರ್ಷ ಪೂರೈಸಿದೆ. ರಾಜ್ಯಾದ್ಯಂತ 50ರ ಸಂಭ್ರಮ ಮನೆ ಮಾಡಿದೆ. ಮಹಾರಾಷ್ಟ್ರದೊಂದಿಗೆ ಗಡಿ ವಿವಾದಹೊಂದಿರುವ ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಕನ್ನಡ ಬಾವುಟಗಳು ಹಾರಾಡುತ್ತಿವೆ. ಬೆಳಗಾವಿ ನಗರ ಅಕ್ಷರಶಃ ಕೆಂಪು-ಹಳದಿ ಬಣ್ಣಗಳಿಂದ ಕಂಗೊಳಿಸುತ್ತಿದೆ.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಕನ್ನಡ ಹಬ್ಬದ ಮೆರಗು ಹೆಚ್ಚಿದೆ. ನಗರದಲ್ಲಿ ಇಡೀ ದಿನ ಕನ್ನಡ ರಾಜ್ಯೋತ್ಸವದ ಮೆರವಣಿಗೆ ನಡೆಯಲಿದೆ. 100 ರೂಪಕ ವಾಹನಗಳು ರಾಜ್ಯೋತ್ಸವ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ. ಹಳದಿ-ಕೆಂಪು ಬಣ್ಣದ ಗಾಳಿಪಟ ಉತ್ಸವವೂ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡಲು ಮುಂದಾಗಿದೆ. ಕರಾಳ ದಿನಾಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಮಹಾರಾಷ್ಟ್ರ ರಾಜಕೀಯ ನಾಯಕರಿಗೆ ಬೆಳಗಾವಿ ಪ್ರವೇಶಿಸದಂತೆ ನಿರ್ಬಂಧ ಹೇಳಿದೆ. ಜಿಲ್ಲೆಯ ಗಡಿ ಭಾಗದಲ್ಲಿ 18 ಚೆಕ್ಪೋಸ್ಟ್ಗಳ ನಿರ್ಮಾಣ ಮಾಡಲಾಗಿದೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಇಬ್ಬರು ಡಿಸಿಪಿ, 12 ಡಿವೈಎಸ್‌ಪಿ, 120ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಸ್, 300 ಪಿಎಸ್‌ಐ, 2000 ಪಿಸಿ, 500 ಹೋಮ್ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಬೆಳಗಾವಿ ನಗರದ ಹಲವೆಡೆ 300 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.