ಬೆಳಗಾವಿಯಿಂದ 16 ಕಿ.ಮೀ ದೂರದಲ್ಲಿರುವ ರಾಜಹಂಸಗಡ ಕೋಟೆಯಲ್ಲಿ ಕೇಬಲ್ ಕಾರ್ ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಯೋಜನೆ ಬಗ್ಗೆ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅಭಯ್ ಪಾಟೀಲ್, “ಕೇಬಲ್ ಕಾರ್ ಯೋಜನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 60 ಕೋಟಿ ರೂಪಾಯಿಯ ಯೋಜನೆಗೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ” ಎಂದಿದ್ದಾರೆ.
“ಯೋಜನಾ ವರದಿ ಸ್ವೀಕರಿಸಿ, ಡಿಸೆಂಬರ್‌ಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡುವ ಬಗ್ಗೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಜನವರಿ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು” ಎಂದು ಶಾಸಕ ಪಾಟೀಲ್ ಹೇಳಿದ್ದಾರೆ.
“ಯೋಜನೆಯಿಂದ ರಾಜಹಂಸಗಡ ಕೋಟೆಯು ಬೆಳಗಾವಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರ ಮತ್ತು ಗೋವಾದ ಜನರಿಗೆ ಪ್ರಮುಖ ಪ್ರವಾಸಿ ತಾಣವಾಗಲಿದೆ” ಎನ್ನುತ್ತಾರೆ ಶಾಸಕರು.
ಕಳೆದ ಕೆಲವು ವರ್ಷಗಳಿಂದ ಕೇಬಲ್ ಕಾರ್ ಯೋಜನೆ ಸಂಬಂಧ ಶಾಸಕ ಪಾಟೀಲ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. 2019ರಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯೋಜನೆಯ ಸಾಧ್ಯತೆಗಳನ್ನು ಪರಿಶೀಲಿಸಿದ್ದರು. 2021ರಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಯೋಜನೆಯನ್ನು ಕೈಗೆತ್ತಿಕೊಂಡರು. ಆದರೆ, ಅದು ಸಾಕಾರಗೊಳ್ಳಲಿಲ್ಲ. ಎರಡು ಕಿಲೋ ಮೀಟರ್ ಉದ್ದದ ಕೇಬಲ್ ಕಾರ್ ಯೋಜನೆ ಬೆಳಗಾವಿಯ ವ್ಯಾಪಾರಹೆಚ್ಚಿಸಲು ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸಹಾಯಕವಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.