ಮೈಸೂರು ಜಿಲ್ಲೆ, ಹುಣಸೂರು, ಹೆಗ್ಗಡದೇವನ ಕೋಟೆ ತಾಲ್ಲೂಕಿನ ವಸತಿ ರಹಿತ ಜನರಿಗಾಗಿ ನಿರ್ಮಿಸುತ್ತಿರುವ ವಸತಿ ಯೋಜನೆ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಎಸ್. ಯುಕೇಶ್ ಕುಮಾರ್ ವೀಕ್ಷಿಸಿ, ಪರಿಶೀಲಿಸಿದರು.
ಹುಣಸೂರು ತಾಲ್ಲೂಕಿನ ಗುರುಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗಪುರ 4 ನೇ ಹಾಡಿ, ಹೆಗ್ಗಡದೇವನ ಕೋಟೆ ತಾಲ್ಲೂಕಿನ ಮಾದಾಪುರ, ಚಕ್ಕೊಡನಹಳ್ಳಿ ಹಾಗೂ ಅಣ್ಣೂರು ಗ್ರಾಮ ಪಂಚಾಯ್ತಿ ವ್ಯಾಪ್ತಿ ಗ್ರಾಮಗಳಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದರು. ಬಸವ, ಅಂಬೇಡ್ಕರ್, ಪಿಎಂಎವೈ ಹಾಗೂ ಪಿಎಂ ಜನ್ಮನ್ ವಿವಿಧ ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣ ಕೆಲಸ ಪ್ರಗತಿಯಲ್ಲಿದ್ದು, ಇದುವರೆಗೆ ನಡೆದಿರುವ ಕಾಮಗಾರಿ, ಆರಂಭಗೊಳ್ಳದ ಕಾಮಗಾರಿ ಕುರಿತಾಗಿ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಿದರು.

ಹುಣಸೂರು ತಾಲ್ಲೂಕಿನ ಗುರುಪುರ ಗ್ರಾಮ ಪಂಚಾಯಿತಿಯಲ್ಲಿರುವ ನಾಗಾಪುರ-4ನೇ ಹಾಡಿಗೆ ಭೇಟಿ ನೀಡಿದ ಅವರು, ಮೊದಲಿಗೆ ತಳಪಾಯ ಹಂತದ ವಸತಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ಮನೆಗಳ ಪರಿಶೀಲನೆ ಸಂದರ್ಭ ಕೆಲವು ಫಲಾನುಭವಿಗಳ ಮನೆಗಳನ್ನು ಪೂರ್ಣಗೊಳಿಸದಿರುವುದು ಕಂಡು ಬಂದಿದ್ದು, ತುರ್ತಾಗಿ ಪ್ರಗತಿ ಸಾಧಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಹಾಗೂ ಪಿಡಿಒ ಅವರಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮೇ. 5 ರಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಸಂಬಂಧ ದತ್ತಾಂಶ ಸಂಗ್ರಹಣೆಗೆ ಸಮೀಕ್ಷೆ : ಶಿಲ್ಪಾ ನಾಗ್

ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಮಲ್ಲೇಶ್, ತಾಲ್ಲೂಕು ಮಟ್ಟದ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ್, ಪಿಡಿಒ ಮಂಜುನಾಥ್, ವಸತಿ ವಿಷಯ ನಿರ್ವಾಹಕಿ ದಿವ್ಯ, ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್, ಸಹಾಯಕ ನಿರ್ದೇಶಕ ಕೆ. ಎಂ. ರಘುನಾಥ್, ಸೇರಿದಂತೆ ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಇದ್ದರು.